ಮಂಗಳವಾರ, ಡಿಸೆಂಬರ್ 9, 2025

ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi



 ** ರೈಟ್ ರೈಟ್ **


ಹಾಸ್ಯ ಲೇಖನ


ಅಂದಿನ ಡ್ಯೂಟಿ ಮುಗಿಸಿ ಮನೆಗೆ ಬಂದೆ. ಮನೆಯಲ್ಲಿ ಏನೋ ಹೊಸ ವಾತಾವರಣ ಮೂಡಿತ್ತು . ಮನೆ ಅಷ್ಟೊಂದು ನೀಟಾಗಿ ಸ್ವಚ್ಚವಾಗಿ ಇರುವುದನ್ನು ಕಂಡು ಬಹಳ ದಿನಗಳೇ ಆಗಿದ್ದವು. ಏನೋ ಒಂದು ನನ್ನ ಅನುಮಾನ ಮನದೊಳಗೆ ಮೂಡಿತ್ತು. ಡ್ರೆಸ್ಸಿಂಗ್ ರೂಮಿನ ಮೂಲೆಯಲ್ಲಿ ಒಂದೆರಡು ಬ್ಯಾಗ್ ಗಳು ಹೊಟ್ಟೆ ಬಿರಿಯುವಷ್ಟು ಬಟ್ಟೆಗಳನ್ನು ನುಂಗಿಕೊಂಡು ಸಿದ್ಧವಾಗಿ ಕುಳಿತಿದ್ದವು. ನನ್ನಾಕೆಯ ಸದ್ದು ಇರಲಿಲ್ಲ . ಎಲ್ಲಿ ಹೋಗಿರಬಹುದು ? ಎಂದು ಯೋಚಿಸುತ್ತಾ ನಿಂತೆ.  'ಸಧ್ಯ ಮನೆ ತಣ್ಣಗೆ ಇದೆಯಲ್ಲ ಅಷ್ಟು ಸಾಕು 'ಎಂದು ಮನದಲ್ಲಿ ಅಂದುಕೊಂಡು ಶೆಖೆ ನಿವಾರಿಸಿಕೊಳ್ಳಲು ಪ್ಯಾನ್  ಹಾಕಿಕೊಂಡು ಸೋಫಾದ ಮೇಲೆ ಕುಳಿತೆ. 

ಅಷ್ಟೊತ್ತಿಗೆ ಹೊರಗಡೆಯಿಂದ ನಾಲ್ಕೈದು ಜನ ಹೆಣ್ಣು ಮಕ್ಕಳು ನಮ್ಮ ಮನೆಯ ಕಡೆಗೆ ಬರುವ ಸದ್ದು ಕೇಳಿ ಬಂತು . ಎದ್ದು ನೋಡಿದಾಗ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳೆಲ್ಲ ನಮ್ಮ ಮನೆಗೆ ದಾಳಿ ಇಡುತ್ತಿರುವುದು ಕಂಡು ಬಂತು. ಎಲ್ಲಾ ಮಹಿಳೆಯರು ಮನೆಯೊಳಗೆ ಬರುತ್ತಿದ್ದಂತೆ ಕುಳಿತುಕೊಳ್ಳಲು ಸೋಫಾ ಬಿಟ್ಟು ಕೊಡಬೇಕಾಯಿತು. 'ಬರ್ರಿ ಬರ್ರಿ' ಎಂದು ಎಲ್ಲರನ್ನೂ ಸ್ವಾಗತಿಸಿದೆ. ತಮ್ಮ ತಮ್ಮೊಳಗೆ ಏನೇನು ಮಾತನಾಡಿಕೊಳ್ಳುತ್ತಾ  ಇರುವುದು ಕಂಡು ಬಂದಿತು.  ಅದಾವುದೋ ಭಾರಿ ಸಿದ್ಧತೆಯಲ್ಲಿ ತೊಡಗಿದಂತೆ ಕಾಣುತ್ತಿತ್ತು. ಪಕ್ಕದ ಮನೆಯ ಪರಿಮಳ "ಸರ್, ನಾವೆಲ್ಲ ಮೂರ್ನಾಲ್ಕು ದಿನ ದೂರದ ಊರುಗಳಿಗೆ ಟೂರ್ ಹೊರಡುತ್ತಿದ್ದೇವೆ. ನಾವೆಲ್ಲ ಮಾತಾಡಿಕೊಂಡು ಧರ್ಮಸ್ಥಳ , ಸುಬ್ರಹ್ಮಣ್ಯ ಮತ್ತು ಇತರ ಕೆಲವು ಸ್ಥಳಗಳನ್ನು ನೋಡಿಕೊಂಡು ಬರುತ್ತೇವೆ. ನಿಮ್ಮ ಮಿಸಸ್ರನ್ನು ಕಳಿಸಿಕೊಡಿ. ನೀವು ತಪ್ಪದೇ ಕಳಿಸಲೇಬೇಕು" ಎಂದು ಕೇಳಿದಾಗ , ಸುಮ್ಮನೆ "ಆಗಲಿ , ಹೋಗಿ ಬನ್ನಿ" ಎಂದು ಅನ್ನಲೇ ಬೇಕಾಯಿತು. 

ಅಷ್ಟೊತ್ತಿಗೆ ನನ್ನಾಕೆ ಎಲ್ಲರಿಗೂ ಟೀ ತಂದು "ತಗೋರಿ,  ನಮ್ಮನೆ ಟೀ ರುಚಿ ನೋಡಿ" ಎಂದು ಎಲ್ಲರಿಗೂ ಸರಬರಾಜು ಮಾಡಿಳು. "ಈಗಾಗಲೇ ಮಂಜಕ್ಕ,  ಗಂಗಕ್ಕ , ರಂಗಕ್ಕ ಎಲ್ಲರ ಮನೆಯಲ್ಲಿ ಟೀ ಕುಡಿದಿದ್ದೇವೆ. ಮತ್ತೆ ಯಾಕೆ ಮಾಡಿದ್ರಿ?!" ಎಂದಳು ಪರಿಮಳ. " ಪರವಾಗಿಲ್ಲ ನಮ್ಮನೆ ಟೀ ರುಚಿ ನೋಡ್ರಿ" ಎನ್ನುತ್ತಿದ್ದಂತೆ ಎಲ್ಲರೂ ಈ ಸವಿದೇ ಬಿಟ್ಟಿದ್ದರು. "ಬಸ್ಸಿಗೆ ಟೈಮ್ ಆಗುತ್ತೆ . ಸೀಟು ಸಿಗದೆ ಹೋದ್ರೆ ತುಂಬಾ ತೊಂದರೆ.  ಸರ್,  ನೀವು ಬೇಗ ಹೋಗಿ ಸೀಟು ಹಿಡಿಯುತ್ತೀರಾ" ಎಂದು ಪಕ್ಕದ ಮನೆ ಪದ್ಮಕ್ಕ ನಯವಾಗಿ ಹೇಳುತ್ತಿದ್ದಂತೆ " ಹೂಂ" ಎಂದು ತಲೆ ಅಲ್ಲಾಡಿಸಿದೆ. "ಇವೆರಡು ಬ್ಯಾಗ್ ತೆಗೆದುಕೊಂಡು ಹೋಗಿ" ಎಂದು ತನ್ನ ಎರಡೂ ಬ್ಯಾಗ್ ಗಳನ್ನು ಕೈಗಿದ್ದಳು ನನ್ನಾಕೆ.


ಬಸ್ಟ್ಯಾಂಡಿಗೆ ಬರುತ್ತಿದ್ದಂತೆ ಅಲ್ಲಿ ಮಹಿಳೆಯರ ದಂಡೆ ನೆರೆದಿತ್ತು. ಈಗಾಗಲೇ ಎರಡು ಮೂರು ಬಸ್ಸುಗಳು ತುಂಬಾ ರಶ್ ಆಗಿ ಹೋಗಿದ್ದರಿಂದ ಡಿಪೋ ಮ್ಯಾನೇಜರ್ ಮತ್ತೆರಡು ಹೊಸ ಬಸ್ಸುಗಳನ್ನು ಬರಲು  ಹೇಳಿದ್ದರು. ಆ ಎರಡೂ ಹೊಸ ಹೊಸಗಳು ಬರುತ್ತಿದ್ದಂತೆ ಜನ ಬಸ್ ಏರಲು ಮುಗಿಬಿದ್ದಿದ್ದರು. ನಾನು ಹಳ್ಳಿಯಿಂದ ನಗರಕ್ಕೆ ಸಂತೆಗೆಂದು ಬಂದಾಗ ಹಳ್ಳಿ ಜನರು  ಬಸ್  ಏರಲು  ಮುಗಿಬಿದ್ದಿದ್ದು,  ಅದರಲ್ಲೇ ನಾನು ಕಿಟಕಿಯೊಳಗೆ ತೂರಿ ಸೀಟ್  ಹಿಡಿದಿಟ್ಟ ಕ್ಷಣಗಳು ನೆನಪಿಗೆ ಬಂದವು. ಈಗಲೂ ಅದೇ ಪರಿಸ್ಥಿತಿ ನನ್ನ ಎದುರಿತ್ತು. ಸೀಟ್ ಸಿಗದೇ ಹೋದರೆ ನನ್ನಾಕೆ ನಿಂತುಕೊಂಡೇ ಹೋಗಬೇಕಲ್ಲ ಎಂಬ ಕನಿಕರದಿಂದ ಬಸ್ ನ ಬಾಗಿಲು ಮೂಲಕ ಒಳ ನುಗ್ಗಲು ಸಾಧ್ಯವಾಗದೆ ಇದ್ದುದರಿಂದ ಅನಿವಾರ್ಯವಾಗಿ ಕಿಟಕಿಯ ಮೂಲಕ ನುಗ್ಗಬೇಕಾಯಿತು. ಮೊದಲೇ ನಾನು ತೆಳ್ಳಗೆ ಇರುವುದರಿಂದ ಕಿಟಕಿಯಿಂದ ನುಸುಳುವುದು ಅಷ್ಟು ಕಷ್ಟವೆನಿಸಲಿಲ್ಲ. ಅದರಲ್ಲೂ ಮೂರು ನಾಲ್ಕು ಗಂಡಸರು ನನ್ನ ಕಾಲುಗಳನ್ನು ಹಿಡಿದು ಕಿಡಿಕಿಯೊಳಗೆ ನುಗ್ಗಲು ಸಹಾಯ ಮಾಡಿದ್ದರು. ಪಕ್ಕದ ಮನೆಯ ಮಹಿಳೆಯರಿಗೂ ಇರಲಿ ಎಂದು ಮೂರು ಸೀಟನ್ನು ಹಿಡಿಯಲು ಬ್ಯಾಗ್ ಗಳನ್ನು ಸೀಟಿನ ಮೇಲಿಟ್ಟೆ. ಆದರೆ ಅದೇ ಸೀಟಿನ ಮೇಲೆ ಎರಡು ಖಾಲಿ ನೀರಿನ ಬಾಟಲ್ ಗಳು ಸೀಟ್ ಹಿಡಿದಿದ್ದವು. ಆ ಬಾಟಲಿಗಳನ್ನು ಬೇರೆ ಸೀಟಿಗೆ ಟ್ರಾನ್ಸ್ಫರ್ ಮಾಡಿ ಬ್ಯಾಗ ಇಟ್ಟೆ ಬ್ಯಾಗಿನಿಂದ ಒಂದು ಹಾಸಿಗೆ ತೆಗೆದು 3 ಸೀಟುಗಳನ್ನು ಕವರ್ ಮಾಡುವಂತೆ ಹಾಕಿದೆ.

ಎರಡು ಮೂರು ಸೆಕೆಂಡಿನಲ್ಲಿ ಬಸ್ಸು ತುಂಬಿ ಹೋಯಿತು. ಬಾಟಲಿ ಇಟ್ಟಿದ್ದವನೊಬ್ಬ ಬಂದು "ಸರ್ ಇಲ್ಲಿ  ಬಾಟಲಿ ಇಟ್ಟಿದ್ದೆ. ನೀವೇನಾದ್ರು ನೋಡಿದ್ರಾ?" ಅಂದ . "ಹಿಂದೆ ಇರಬೇಕು ನೋಡಿ" ಎಂದೆ . ಹೆಣ್ಣು ಮಕ್ಕಳೆಲ್ಲ ಅವನನ್ನು ಮುಂದಕ್ಕೆ  ದೂಡಿದರು. ಅಷ್ಟೊತ್ತಿಗೆ ನನ್ನಾಕೆ ಹಾಗೂ ಅವಳ ಬಳಗವೆಲ್ಲ ಬಸ್ ಏರಿದ್ದರು. " ಮನೆ ಕಡೆ ಹುಷಾರು ರೀ,  ಮನೆ ಬಿಟ್ಟು ಎಲ್ಲೂ ಹೋಗಬೇಡಿ. ಖರ್ಚಿಗೆ ಸ್ವಲ್ಪ ಹಣ ಕೊಡ್ತೀರಾ?" ಎಂದಳು ನನ್ನಾಕೆ ನಯವಾಗಿ. ಸರಿ ಎಂದು 2,000 ಕೈಗೆ ಕೊಟ್ಟೆ.  "ರೀ ಇಷ್ಟು ಸಾಲಲ್ಲ ಅಲ್ಲಿ ಏನೇನೋ ಖರ್ಚು ಇರುತ್ತೆ. ಇನ್ನು ಸ್ವಲ್ಪ ಕೊಡಿ" ಎಂದಳು. ಪಕ್ಕದಮನೆ  ಪದ್ಮಕ್ಕ ನನ್ನನ್ನು ಗುರಾಯಿಸಿ ನೋಡುತ್ತಾ , " ಸರ್,   ಒಂದು ಹತ್ತು ಸಾವಿರ ಕೊಡಿ. ಹೆಣ್ಮಕ್ಳಿಗೆ  ಬೇರೆ ಬೇರೆ ಖರ್ಚು ಇರ್ತವೆ." ಅಂದಳು.  'ಬಸ್ ಚಾರ್ಜೇ ನೂರರ ಲೆಕ್ಕದಲ್ಲಿ ಉಚಿತ  ಇದ್ದರೆ ಖರ್ಚು ಸಾವಿರ ಲೆಕ್ಕದಲ್ಲಿ ಇದೆಯಲ್ಲ' ಎಂದು ಮನಸ್ಸಿನಲ್ಲಿ ಅಂದುಕೊಂಡು, ಕಿಸೆಯಲ್ಲಿದ್ದ ಎಲ್ಲಾ ನೋಟುಗಳನ್ನು ಹೆಂಡತಿಯ ಕೈಗಿಟ್ಟೆ. "ಇಷ್ಟು ಸಾಕಾಗುತ್ತಲ್ಲ ರತ್ನಕ್ಕ " ಎಂದು ಮುಂದಿನಮನೆ ರತ್ನಕ್ಕಳನ್ನು ನನ್ನಾಕೆ ಕೇಳಿದಳು. "ಇಷ್ಟೂ ಸಾಲದೇ ಹೋದರೆ ಮಂಜಕ್ಕನ ಬಳಿ ಎಟಿಎಂ ಇದೆ ಅವರ ಬಳಿ ಸಾಲ ಕೇಳಿದರಾಯ್ತು" ಎಂದು ಮೆಲ್ಲಗೆ ಅಂದದ್ದು ನನ್ನ ಕಿವಿಗೆ ಬಿತ್ತು.   "ರೈಟ್ ರೈಟ್" ಎಂದು ಕಂಡಕ್ಟರ್ ಅನ್ನುತ್ತಿದ್ದಂತೆ ನಾನು ಇನ್ನೂ ಬಸ್ಸಿನಲ್ಲೇ ಇರುವುದು ಅರಿವಿಗೆ ಬಂತು. "ರೀ ಕಂಡಕ್ಟರ್ ಇರಿ, ನಾವು ಇಳಿಬೇಕು" ಎಂದು ಐದಾರು ಜನ  ಗಂಡು ಮಕ್ಕಳೊಂದಿಗೆ ನಾನೂ ಲಘು ಬಗೆಯಿಂದ ಗದ್ದಲದಲ್ಲಿ ತೂರಿ ಕೆಳಗೆ ಇಳಿಯಬೇಕಾಯಿತು. 

ಯಾರೋ ಯಾರದೋ ಕಾಲು ತಾಗಿದ್ದಕ್ಕೆ  ಜಗಳವೇ ಶುರುವಾಯಿತು. ಕಂಡಕ್ಟರ್ ಯಾವುದಕ್ಕೂ ಕಿವಿಗೊಡದೆ ಸೀಟುಗಳ ಮೇಲೆ ಕುಳಿತು ಟಿಕೆಟ್ ತೆಗೆದುಕೊಳ್ಳುತ್ತಿದ್ದ . ಬಾಗಿಲು ಬಳಿ ಇನ್ನೂ ಮೂರ್ನಾಲ್ಕು ಜನ ಗಂಡು ಮಕ್ಕಳು  ಹತ್ತುವ ಭರದಲ್ಲಿದ್ದರು. ಮತ್ತೆ ಕಂಡಕ್ಟರ್ 'ರೈಟ್ ರೈಟ್' ಎಂದ.  ನನ್ನಾಕೆ ಕಿಟಕಿಯಿಂದಲೇ ಟಾಟಾ ಎಂದು ಕೈಬೀಸಿದಳು. ನಾನು ಕೂಡ ಪ್ರಯಾಣ ಸುಖಕರವಾಗಿರಲಿ ಎನ್ನುವಂತೆ ಹರಸುತ್ತ 'ರೈಟ್ ರೈಟ್' ಎಂದೆ.


ಆಗದು ಎಂದು ಕೈ ಕಟ್ಟಿ ಕುಳಿತರೆ...!! | ಲೇಖನ | ವೆಂಕಟೇಶ ಚಾಗಿ | aagadu endu kai katti kulitare | lekhana | venkatesh chagi

 

ಆಗದು ಎಂದು ಕೈ ಕಟ್ಟಿ ಕುಳಿತರೆ...!!

ಲೇಖನ

ಜೀವನದಲ್ಲಿ ಕಷ್ಟ ಸುಖಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ್ಣವಾಗಿ ಕಷ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ್ಣವಾಗಿ ಸುಖವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ್ಣ ಸುಖದಿಂದ ಬದುಕಲಿ ಎಂದು ದೇವರು ಆಶೀರ್ವಾದ ಮಾಡಿ ಕಳುಹಿಸಿರುವುದಿಲ್ಲ ಅಥವಾ ಕಷ್ಟವೇ ಇವನ ಬದುಕಾಗಲಿ ಎಂದು ಶಾಪ ನೀಡಿ ಕಳುಹಿಸಿರುವುದಿಲ್ಲ. ಬದುಕು ಶೂನ್ಯದಿಂದಲೇ ಪ್ರಾರಂಭವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಖದ ಯಶಸ್ಸಿನ ಅನುಭವ ದೊರೆಯುತ್ತದೆ. ಯಶಸ್ಸಿನ  ಶಿಖರವೇರುವಾಗ ಮಾಡಬೇಕಾದ ಪ್ರಯತ್ನವೇ ಕಷ್ಟವೆನಿಸುತ್ತದೆಯೆರ ಹೊರತು ಕಷ್ಟವೆಂಬುದು ಬೇರೊಂದಿಲ್ಲ.

ಯಶಸ್ಸು ಪಡೆಯುವಂತಹ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿಕೊಂಡು ಕುಳಿತಿರುವುದಿಲ್ಲ. ಕ್ರೀಡೆ , ಸಿನಿಮಾ , ರಾಜಕೀಯ , ಕಲೆ ಸಾಹಿತ್ಯ , ವಿಜ್ಞಾನ , ಕೃಷಿ , ಆಡಳಿತ , ಸೇವೆ  ಹೀಗೆ ಹಲವಾರು ಕ್ಷೇತ್ರಗಳು ಅವಕಾಶಗಳು ನಮ್ಮ ಮುಂದಿವೆ. ಯಾವುದೇ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಯಾವುದೇ ರಂಗವನ್ನು ಆಯ್ಕೆಮಾಡಿಕೊಂಡರೂ ಯಶಸ್ಸು ಪಡೆಯುವುದು ಅಷ್ಟು ಸುಲಭವಲ್ಲ. ಯಶಸ್ಸಿಗಾಗಿ ಶ್ರಮ ಪಡದೇ ಇರುವುದು ಜೀವನವೇ ಅಲ್ಲ. 

ಒಂದು ಪಕ್ಷಿ ತಾನು ಒಂದು ಗೂಡು ಕಟ್ಟಿಕೊಂಡು ಅದರಲ್ಲಿ ಮೊಟ್ಟೆ ಇಟ್ಟು , ಕಾವು ಕೊಟ್ಟು , ಮರಿಗಳನ್ನು ಮಾಡಿ  , ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ ಪ್ರಯತ್ನ ಅಷ್ಟು ಸುಲಭವಲ್ಲ. ಅಯ್ಯೋ ಅಷ್ಟೊಂದು ಕಷ್ಟ ನನಗ್ಯಾಕೆ ಎಂದು ಪಕ್ಷಿ ಯಾವತ್ತೂ ಸುಮ್ಮನೆ ಕುಳಿತಿಲ್ಲ. ಗೂಡು ಕಟ್ಟಲು ಸೂಕ್ತವಾದ ಸ್ಥಳ ಹುಡುಕುವುದೇ ಅದರ ಮುಂದಿರುವ ಅತೀ ದೊಡ್ಡ ಸವಾಲು. ಆದರೂ ಸಮಯ ವ್ಯರ್ಥ ಮಾಡದೇ ಅಂತಹ ಸ್ಥಳವನ್ನು ಹುಡುಕುತ್ತದೆ. ತನ್ನ ಶ್ರಮ ಮುಂದಿನ ದಿನಗಳಲ್ಲಿ ವ್ಯರ್ಥ ಆಗಬಾರದು ಎಂಬುದು ಅದರ ಉದ್ದೇಶ. ಗೂಡು ಕಟ್ಟುವುದೂ ಅಷ್ಟು ಸುಲಭವಲ್ಲ ಹಕ್ಕಿಗೆ.‌ ಹಲವಾರು ಪ್ರದೇಶಗಳಿಗೆ ತೆರಳಿ ತನ್ನ ಗೂಡಿಗೆ ಬೇಕಾದ ಸೂಕ್ತವಾದ ಹುಲ್ಲು ಕಡ್ಡಿಗಳನ್ನು ಆಯ್ದುಕೊಂಡು ಬಂದು ಹಲವು ದಿನಗಳ ವರೆಗೆ ಶ್ರಮವಹಿಸಿ ಗೂಡು ಕಟ್ಟುತ್ತದೆ. ನಂತರ ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳ ಪೋಷಣೆ ಮಾಡುತ್ತದೆ. ಇದು ಹಕ್ಕಿಯ ಜೀವನ.

 ಹಕ್ಕಿಯ ಬದುಕಿನಲ್ಲೂ ಹಲವಾರು ಕಷ್ಟಗಳು ಎದುರಾತ್ತವೆ ಅಂದ ಮೇಲೆ ಮನುಷ್ಯನ ಬದುಕಿನಲ್ಲೂ ಕಷ್ಟಗಳು ಬರದೇ ಇರುವುದಿಲ್ಲ. ಮಾಡಬೇಕಾದ ಕೆಲಸ ಕಾರ್ಯ ಸಾಧ್ಯವಿಲ್ಲ ಎಂದು ಕುಳಿತಾಗ ಜೀವನ ಸಾರ್ಥಕವಾಗುವುದಾದರೂ ಹೇಗೆ..? ಬದುಕನ್ನು ಬದುಕಿಸಿ. ಬದುಕಿ ಸಾಧಿಸಿ. ಸಾಧಿಸಿ ಬದುಕನ್ನು ಗೆಲ್ಲಿಸಿ.

=> ವೆಂಕಟೇಶ ಚಾಗಿ

ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi

 ಕಾಣದ ಕಡಲು


(ಲೇಖನ)

ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷವೇನೋ ಪ್ರಾರಂಭ ವಾಯಿತು. ಶಾಲೆಯ ಮುಖ್ಯ ಗುರುಗಳು ಎಲ್ಲ ಶಿಕ್ಷಕರಿಗೂ ತರಗತಿ ಹಾಗೂ ವಿಷಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು ಸಲಹೆ ನೀಡಿದರು. ನನ್ನ ಪಾಲಿಗೆ ಬಂದದ್ದು ನಲಿಕಲಿ ತರಗತಿ. ಅದರಂತೆ ತರಗತಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಶ್ರದ್ದೆಯಿಂದ ಕೈಗೊಂಡು ತರಗತಿಯನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸಿದೆ. ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ದಿನ ಮಕ್ಕಳು ಹಾಜರಾಗತೊಡಗಿದರು. ನನ್ನ ತರಗತಿ ಸುಗಮವಾಗಿ ನಡೆಯತೊಡಗಿತು. 

ಆ ಒಂದು ದಿನ ತರಗತಿಗೆ ಬಂದಾಗ ಎಲ್ಲಾ ಮಕ್ಕಳು ತಮ್ಮ ತಮ್ಮ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಓರ್ವ ವಿದ್ಯಾರ್ಥಿ ಮಾತ್ರ ತನ್ನಷ್ಟಕ್ಕೆ ತಾನೇ ಮಾತನಾಡುತ್ತಾ ಕುಳಿತಿದ್ದ. " ಯಾಕಪ್ಪಾ ಅಲ್ಲಿ ಕುಳಿತಿದ್ದಿಯಾ? ಬಾ , ನಿನ್ನ ಸ್ನೇಹಿತರೊಂದಿಗೆ ಕುಳಿತುಕೊ" ಎಂದು ಮಾತನಾಡಿಸಿದೆ. ಮಕ್ಕಳೆಲ್ಲಾ " ಸಾರ್ , ಅವನಿಗೆ ಕಣ್ಣು ಕಾಣಲ್ಲ ಸರ್. ದಿನಾಲೂ ಅವನು ಅದೇ ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ." ಎಂದರು. ಮತ್ತೆ ಮುಂದುವರೆಸಿ " ಅವನಿಗೇನೂ ಬರಲ್ಲ ಸರ್ , ಅವ್ನು ತುಂಬಾ ದಡ್ಡ ಸರ್ ಆದರೆ ಚೆನ್ನಾಗಿ ಹಾಡು ಹೇಳ್ತಾನೆ" ಎಂದರು. ಮೂಲೆಯಲ್ಲಿ ಕುಳಿತ ಹುಡುಗನನ್ನು ನಯವಾಗಿ ಮಾತನಾಡಿಸಿದೆ. ಅವನನ್ನು ಮಕ್ಕಳ ಮಧ್ಯ ಕೈ ಹಿಡಿದು ಕರೆತಂದು ನಿಲ್ಲಿಸಿ , ನಿನ್ನ ಹೆಸರು ಏನಪ್ಪಾ ಎಂದೆ. ಅದಕ್ಕವನು "ಸರ್, ನನ್ನ ಹೆಸರು ನಾಗರಾಜ ಸರ್" ಎಂದ. ಹಾಗೇಯೇ ಅವನ ಕುಟುಂಬದ ಬಗ್ಗೆ ವಿಚಾರಿಸಿದಾಗ ನಿರರ್ಗಳವಾಗಿ ನಾನು ಕೇಳುವ ಪ್ರಶ್ನೆಗಳಿಗೆ ಫಟ್ ಫಟ್ ಎಂದು ಉತ್ತರಿಸಿದ. ಹಾಗೆಯೇ ಕನ್ನಡ ಇಂಗ್ಲಿಷ್ ಮೂಲಾಕ್ಷರಗಳನ್ನು , ವಾರಗಳನ್ನು , ಮಗ್ಗಿಗಳನ್ನು ಸರಾಗವಾಗಿ ಹೇಳಿದ. " ನೀನು ಹಾಡು ಚೆನ್ನಾಗಿ ಹೇಳ್ತಿಯಂತಲ್ಲೋ " ಎಂದಾಗ ಒಂದು ಜನಪದ ಗೀತೆಯನ್ನೂ ಹೇಳಿದ. ಅವನಲ್ಲಿರುವ ಉತ್ಸಾಹ ಕಂಡು ಮೂಕವಿಸ್ಮಿತನಾದೆ. "ಗುಂಪಿನಲ್ಲಿ ಯಾಕೆ ಕುಳಿತುಕೊಳ್ಳಲ್ಲ ನೀನು ? " ಎಂದಾಗ " ಸಾರ್  ನನ್ನ ದೂಡ್ತಾರೆ ಸರ್, ನಂಗೆ ಏನೇನೋ ಮಾತಾಡ್ತಾರೆ. ಅದ್ಕೆ ನಾನು ಇಲ್ಲಿ ಕುತಿರ್ತೀನಿ." ಅವನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ. ಎರಡು ಕಣ್ಣುಗಳು ಇಲ್ಲದಿದ್ದರೂ ಕಿವಿಗಳು ಚೆನ್ನಾಗಿ ಕೇಳುತ್ತಿದ್ದವು. ಅವನ ಗ್ರಹಣ ಶಕ್ತಿ ಎಷ್ಟಿತ್ತೆಂದರೆ ಒಂಡೆರಡು ಬಾರಿ ಹೇಳಿದ ಶಬ್ದಗಳನ್ನು ತಕ್ಷಣ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಆದರೆ ಇತರೆ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು ಅವನಿಗೆ ಕಷ್ಟವೆನಿಸುತ್ತಿತ್ತು. ಹಿಂದೆ ಆ ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಶಿಕ್ಷಕರ ಬಳಿ ಆ ಮಗುವಿನ ಬಗ್ಗೆ ಚರ್ಚಿಸಿದೆ. "ಸರ್ , ಅವರ ಮನೆಯಲ್ಲಿ ಬಡತನ. ತಂದೆ ಇಲ್ಲ ತಾಯಿ ಇದ್ದಾಳೆ. ಒಬ್ಬ ನಮ್ಮ ಶಾಲೆಯಲ್ಲೆ ಓದುತ್ತಿದ್ದಾನೆ. ಇವನನ್ನು ವಿಶೇಷ ಶಾಲೆಗೆ ಸೇರಿಸಲು ಹೇಳಿದೆವು . ಆದರೆ ತಾಯಿ ಒಪ್ಪಲಿಲ್ಲ. ಹಿಂದೆ ಈ ಕೆಲಸ ಮಾಡಿದಾಗ ಅವನು ತಾಯಿಯಿಂದ ದೂರ ಇರದೇ ಮತ್ತೆ ಮನೆಗೆ ಬಂದ. ಈಗ ನಮ್ಮಲ್ಲಿ ಇರುವವರೆಗೂ ಅವನಿಗೆ ಸಾಧ್ಯವಾದಷ್ಟು ವಿದ್ಯೆ ನೀಡಬೇಕಷ್ಟೆ . ಅವನು ಕಲಿತಷ್ಟು ಕಲಿಯಲಿ. ಅನವ ಬಗ್ಗೆ ಜಾಸ್ತಿ ಗಮನ ಹರಿಸಬೇಡಿ." ಎಂದರು. 

ಅವರ ಸಲಹೆ ನನಗೇಕೊ ಸರಿ ಎನಿಸಲಿಲ್ಲ. ಆದರೂ ಅವರು ಆ ವಿದ್ಯಾರ್ಥಿ ಗಾಗಿ ಹಲವಾರು ಪ್ರಯತ್ನ ಗಳನ್ನು ಮಾಡಿ ವಿಫಲರಾಗಿದ್ದರು.ಎಲ್ಲ ಮಕ್ಕಳಂತೆ ಅವನೂ ಕಲಿಯಲು ಶಾಲೆಗೆ ಬಂದಿದ್ದಾನೆ. ಅವನಲ್ಲಿರುವ ಪ್ರತಿಭೆಗೆ ಸೂಕ್ತ ಒಳಪು ನೀಡಬೇಕು ಎಂದೆನಿಸಿತು. ಪ್ರತಿದಿನ ತರಗತಿಯಲ್ಲಿ ಎಲ್ಲಾ ಮಕ್ಕಳೊಂದಿಗೆ ಅವನು ಬೆರೆಯುವಂತೆ ಸಂದರ್ಭಗಳನ್ನು ಸೃಷ್ಟಿಸಿದೆ.ಎಲ್ಲ ಚಟುವಟಿಕೆಗಳಲ್ಲೂ ಅವನು ಪಾಲ್ಗೊಳ್ಳತೊಡಗಿದನು. ಅವನ ಸ್ಮರಣ ಶಕ್ತಿ ಗೆ ತಕ್ಕಂತೆ ಕಲಿಕೆಯಲ್ಲಿ ಪ್ರಗತಿ ಸಾಧಿಸಿ ಹಿರಿಯ ವಿದ್ಯಾರ್ಥಿ ಗಳಿಗೂ ಪ್ರಶ್ನಿಸುವ ಸಾಮರ್ಥ್ಯ ಅವನಲ್ಲಿ ಬೆಳೆಯಿತು. ಎಲ್ಲ ಮಕ್ಕಳ ದ್ವನಿ ಅವನಲ್ಲಿ ಎಷ್ಟು ಕರಗತವಾಗಿತ್ತೆಂದರೆ ಯಾರೇ ಮಾತನಾಡಿದರೂ ಅವರ ಹೆಸರನ್ನು ಗುರುತಿಸುತ್ತಿದ್ದ. ಲೆಕ್ಕಾಚಾರವನ್ನು ಮನದಲ್ಲೆ ಮಾಡಿ  ಪೆನ್ನು ಪುಸ್ತಕ ಹಿಡಿದ ಮಕ್ಕಳಿಗಿಂತ ಮೊದಲೇ ಉತ್ತರ ಹೇಳುತ್ತಿದ್ದ. ಶಾಲೆ ಬಿಡುವ ಮೊದಲು " ಸರ್ , ಹೋಮ್ ವರ್ಕ ಏನು ಸರ್ ?" ಎಂದು ಕೇಳುವ ಮೊದಲ ದ್ವನಿ ಅವನದಾಗಿತ್ತು. "ನೀನು ಹೇಗೋ ಹೋಂ ವರ್ಕ ಮಾಡ್ತಿಯಾ? " ಎಂದರೆ " ಸರ್, ನಾನು ಹೇಳ್ತಾ ಹೋಗ್ತೇನೆ ನಮ್ಮ ತಾಯಿ ಬರೆಯುತ್ತಾಳೆ ಸರ್. ನೀವು ನಂಗೆ ಜಾಸ್ತಿ ಹೋಂ ವರ್ಕ ಕೊಡಿ ಸರ್ " ಎಂದಾಗ ಅವನ ಮಾತುಗಳು ಮನತಟ್ಟಿದವು. ಅವನಲ್ಲಿರುವ ಕಲಿಯುವ ಆಸಕ್ತಿ , ನಿರ್ಭಯ ಅವನ ಬಲವಾದರೆ ದೃಷ್ಟಿ ಇಲ್ಲದಿರುವುದು ಕೊರತೆ ಎನ್ನಿಸಲಿಲ್ಲ. ಸಭೆ ಸಮಾರಂಭಗಳಲ್ಲಿ , ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿ ಅವಕಾಶ ನೀಡಿದಾಗ ಪ್ರಶಸ್ತಿ ಪಕ್ಕಾ ಇತ್ತು. 
ಇಂತಹ ಅನೇಕ ಮಕ್ಕಳು ನಮ್ಮ ಶಾಲೆಗಳಲ್ಲಿ ಇದ್ದಾರೆ. ಅಂಗವಿಕಲತೆ ಮಕ್ಕಳ ಕಲಿಕೆಗೆ ಅಡ್ಡಿ ಆಗಬಾರದಷ್ಟೇ . ಅವಕಾಶಗಳನ್ನು ಅಂತಹ ಮಕ್ಕಳಿಗೆ ನೀಡಿದಾಗ ತಮ್ಮ ಪ್ರತಿಭೆಯನ್ನು 
ಜಗತ್ತಿಗೆ ತೋರ್ಪಡಿಸಲು ಸಾಧ್ಯವಾಗುತ್ತದೆ ಅಲ್ಲವೇ. ಹಳ್ಳಿಗಾಡಿನ ಪ್ರದೇಶಗಳು, ಸ್ಲಂ ಗಳು, ಮನೆ ಪರಿಸರದ ಅನಾನುಕೂಲತೆಯಲ್ಲಿ ಬದುಕುವ ಇಂತಹ ಮಕ್ಕಳು ವಿಶೇಷ ಶಾಲೆಗಳಲ್ಲಿ ಪ್ರವೇಶ ಹೊಂದಲು ಅನಿವಾರ್ಯ ಕಾರಣಗಳಿಂದ ಸಾದ್ಯವಾಗದೇ ಇರಬಹುದು. ಆದರೆ ಪಾಲಕರು , ಸ್ಥಳೀಯ ಶಾಲೆಯ ಶಿಕ್ಷಕರ ಪ್ರೋತ್ಸಾಹ ಇಂತಹ ಮಕ್ಕಳ ಬದುಕಿನಲ್ಲಿ ಆಶಾಕಿರಣವನ್ನೇ ಮೂಡಿಸಬಹುದು. 

=> ವೆಂಕಟೇಶ ಚಾಗಿ



ಬನ್ನಿ ಕಾಲ ಕಾಲಕ್ಕೆ ಅಪ್ ಡೇಟ್ ಆಗೋಣ | ಲೇಖನ‌ | ವೆಂಕಟೇಶ ಚಾಗಿ | Banni kaala kaalakke update aagona | lekhana | venkatesh chagi



**ಬನ್ನಿ ಕಾಲ ಕಾಲಕ್ಕೆ ಅಪ್ ಡೇಟ್ ಆಗೋಣ**



ಕಾಲ ನಾವಂದುಕೊಂಡಂಗೆ ಹಾಗೇ ಇರಲ್ಲ ಪ್ರತಿ ದಿನ ಪ್ರತಿ ಕ್ಷಣ ಬದಲಾಗುತ್ತಾ ಇರುತ್ತೆ. ಹಾಗಂತ ನಾವು ಬದಲಾಗದೇ ಇದ್ರೆ ಆಗುವ ತೊಂದರೆ ಕೂಡಾ ನಮಗೇನೆ. ಹಾಗಾಗಿ ನಾವೂ ಕಾಲದೊಂದಿದೆ ಪಯಣ ಮಾಡುತ್ತಾ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾಗುತ್ತದೆ. 


ವೆಂಕಟೇಶ ನನ್ನ ಸ್ನೇಹಿತ. ತುಂಬಾ ಬುದ್ದಿವಂತ. ಓದಿನಲ್ಲಿ ತುಂಬಾ ಮುಂದಿದ್ದ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ನನ್ನ ತಂದೆಯವರಿಗೆ ವರ್ಗಾವಣೆ ಆದ ಕಾರಣ ನಾವು ಬೇರೆ ಊರಿಗೆ ತೆರಳಬೇಕಾಯಿತು.  ಬಹುದಿನಗಳ ನಂತರ ನಾನು ಚಿಕ್ಕ ವಯಸ್ಸಿನವನಿದ್ದಾಗ ನಮ್ಮ ಮನೆಯವರೆಲ್ಲ ವಾಸವಿದ್ದ ಆ ಊರಿಗೆ ಮತ್ತೊಬ್ಬ ಗೆಳೆಯನ ಮದುವೆಗೋಸ್ಕರ ತೆರಳಿದೆ. ಆ ಊರು ತುಂಬಾ ಬದಲಾಗಿತ್ತು. ಗುಡಿಸಲುಗಳೆಲ್ಲ ಸಿಮೆಂಟ್ ಮನೆಗಳಾಗಿವೆ . ರಸ್ತೆ ಗಳು , ಮನೆಗಳು ,ಅಂಗಡಿಗಳು, ಎಲ್ಲವೂ ಸೂಪರ್. ಆ ಮದುವೆಗೆ ನನ್ನ ಪ್ರಾಥಮಿಕ ಶಾಲಾ ಅಂತದ ಸ್ನೇಹಿತರೆಲ್ಲಾ ಬಂದಿದ್ದರು . ಅವರೆಲ್ಲಾ ಉತ್ತಮ ಸ್ಥಾನದಲ್ಲಿದ್ದು ತೃಪ್ತಿಕರವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಸ್ನೇಹಿತ ವೆಂಕಟೇಶನ ಜೀವನದ ಚಿತ್ರಣವೇ ಬೇರೆಯಾಗಿತ್ತು. ಅವನ ಬಡತನದ ಪರಿಸ್ಥಿತಿ ಮೊದಲಿಗಿಂತಲೂ ಕನಿಷ್ಠ ವಾಗಿತ್ತು. ಚಿಕ್ಕ ಕುಟುಂಬವಾದರೂ ಅವನ ಈ ಪರಿಸ್ಥಿತಿ ಗೆ ಅವನ ಮನೋಧೊರಣೆಯೇ ಕಾರಣವಾಗಿತ್ತು. ಮೊದಲಿನಿಂದಲೂ ಸಮಾಜದೊಂದಿಗೆ  ಬೆರೆಯದ ಹಾಗೂ ಕಾಲದಿಂದ ಕಾಲಕ್ಕೆ ಅಪ್ ಡೇಟ್ ಆಗದ ಅವನ ಸ್ವಭಾವದಿಂದಾಗಿ ಸ್ವಯಂ ಅಭಿವೃದ್ಧಿ ಹೊಂದದೇ ಇರುವುದು ಸ್ಪಷ್ಟ ವಾಗಿ ಗೋಚರವಾಗುತ್ತಿತ್ತು. 

ಕಾಲದೊಂದಿಗೆ ಅಪ್ ಡೇಟ್ ಆಗಬೇಕಾಗಿರುವುದು ಎಷ್ಟೋಂದು ಅವಶ್ಯಕತೆ ಇದೆ ಅಲ್ಲವೇ. ಕಾಲದಿಂದ ಕಾಲಕ್ಕೆ ಪರಿಸರದೊಂದಿಗೆ , ಸಮಾಜದೊಂದಿಗೆ ಹೊಂದಾಣಿಕೆಯಾಗುವುದು ಬಹು ಮುಖ್ಯ. ಆದರೆ ನಕಾರಾತ್ಮಕ ಅಭಿವೃದ್ಧಿ ಅಭಾಸ. ನಾನು ಬೆಳೆಯಬೇಕು ನನ್ನೊಂದಿಗೆ ಇರುವವರೂ ಬೆಳೆಯಬೇಕು ಉಳಿಯಬೇಕು ಎನ್ನುವ ಮನೋಧೋರಣೆ ಒಳಗೊಂಡಾಗ ಅಭಿವೃದ್ಧಿ ಹೊಂದಲು ಸಾದ್ಯ. ಬನ್ನಿ ನಾವೂ ಕಾಲಕಾಲಕ್ಕೆ ಅಪ್ ಡೇಟ್ ಆಗೋಣ.

=> ವೆಂಕಟೇಶ ಚಾಗಿ


ಶಿಕ್ಷಕನೆಂದರೆ | ಲೇಖನ | ವೆಂಕಟೇಶ ಚಾಗಿ | shikshakanendare | lekhana | venkatesh chagi

  ಶಿಕ್ಷಕನೆಂದರೆ


(ಲೇಖನ)

ಯೂನಿಫಾರ್ಮ್ ಹಾಕಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು ಯಾವುದೋ ಯುದ್ದಕ್ಕೆ ಹೊರಟಂತೆ ಸಿದ್ದರಾಗಿ ಹೊರಟುನಿಂತ ಮಗುವಿನ ಕಣ್ಣುಗಳಲ್ಲಿ ಅದೆಷ್ಟೋ ಕನಸುಗಳು ಮೊಳೆಯುತ್ತಿವೆ. ಹೊಸ ಲೋಕಕ್ಕೆ ಹೊಸ ಪಯಣವನ್ನು ಬೆಳೆಸುತ್ತಾ ಪರಿಚಯವಾದ ಎಲ್ಲರೊಡನೆ ಬೆರೆಯುತ್ತಾ ಬದುಕನ್ನು ರೂಪಿಸಿಕೊಳ್ಳುವ ತವಕ ಮಗುವಿನಲ್ಲಿ ಅರಿವಿಲ್ಲದೆ ಬೆಳೆಯುತ್ತದೆ . ಹೆತ್ತು ಹೊತ್ತು  , ತುತ್ತನ್ನಿತ್ತು  ಬೆವರು ಹರಿಸಿ ನೋವು-ನಲಿವುಗಳನ್ನು ಉಂಡಂತಹ ತಂದೆ-ತಾಯಿಯರ ಮನದಲ್ಲಿ ಅದೆಷ್ಟೋ ಅಪರೂಪದ ಅದೆಷ್ಟು ಅಪರೂಪದ ಕನಸುಗಳು ಬಯಕೆಗಳು ತಾಂಡವವಾಡುತ್ತವೆ. ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಹೊಂದಿಕೊಂಡು ಬದುಕು ರೂಪಿಸುವ ಹಾಗೂ ತಾನು ಬೆಳೆಯುವ ಅವಶ್ಯಕತೆ ಪ್ರತಿ ಮಗುವಿನ ಹೆಗಲೇರುತ್ತದೆ . ಕನಸುಗಳ ಹೊತ್ತುಕೊಂಡು ಮಗು ಶಾಲೆಯ ಬಾಗಿಲನ್ನು ತಟ್ಟುತ್ತದೆ ಎಂದ ಮೇಲೆ ಶಾಲೆಯ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಲೇಬೇಕು . 

ಬದುಕು 
ಕಾಲದೊಂದಿಗೆ ಓಡುವ 
ನಮ್ಮದೇ ರಿಲೆ ,
ನಗುವಿನೊಂದಿಗೆ ಬದುಕ 
ಗೆಲ್ಲುವುದನ್ನು ಕಲಿಸುವುದೇ
ಜೀವನದ ಶಾಲೆ ..!!

ಎಲ್ಲರ ಬದುಕಿನಲ್ಲೂ ಶಾಲಾಜೀವನ ಮರೆಯದ ಅನುಭವಗಳನ್ನು ನೀಡುವಂತಹ ಒಂದು ಪಾಠಶಾಲೆ. ಶಿಕ್ಷಕರು ಸಹಪಾಟಿಗಳು ಆಟ-ಪಾಠ ಓದು ಬರಹ, ಪಠ್ಯ ಸಹಪಠ್ಯ ಹೀಗೆ ಹಲವಾರು ಅಂಶಗಳು ಪ್ರತಿಯೊಬ್ಬನ ಜೀವನದಲ್ಲಿ ಪ್ರಭಾವವನ್ನು ಬೀರುವುದಂತೂ ಸತ್ಯ. ಈ ಹಂತದಲ್ಲಿ ಶಿಕ್ಷಕರ ಪಾತ್ರ ಅತೀ  ಮಹತ್ವವಾದದ್ದು . ಸಮಾಜವನ್ನು ರೂಪಿಸುವಂತಹ ಕಲೆ ಗೊತ್ತಿರುವುದೇ ಶಿಕ್ಷಕರಿಗೆ. ಅದಕ್ಕೆ ಹೇಳುವುದು,

 ಗುರುಬ್ರಹ್ಮ ಗುರುವಿಷ್ಣು
 ಗುರುದೇವೋ ಮಹೇಶ್ವರ 
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ ||

ಎನ್ನುವ ಮಾತು ಖಂಡಿತ ಸತ್ಯ . ಹಿಂದಿನ ಕಾಲದಲ್ಲಿ ಗುರುವನ್ನು ಹುಡುಕಿಕೊಂಡು ಹೋಗಿ ಶಿಕ್ಷಣವನ್ನು ಪಡೆಯುವಂತಹ ಪದ್ಧತಿಯನ್ನು ನಾವು ಇತಿಹಾಸದಿಂದ ತಿಳಿಯುತ್ತೇವೆ. ಗುರುವಿನ ಮಹತ್ವವನ್ನು  ಪುರಾಣ ಪುಣ್ಯ ಕಥೆಗಳಲ್ಲಿಯೂ ಕಾಣಬಹುದು. ಅಸ ಶುಕ್ರಾಚಾರ್ಯರು , ದ್ರೋಣಾಚಾರ್ಯರು ಹೀಗೆ ಹಲವಾರು ಉದಾಹರಣೆಗಳನ್ನು ನೀಡಬಹುದು.  ಆದರೂ ತಾಯಿಯೇ ಮೊದಲ ಗುರು ಎಂಬುದಂತೂ ಸರ್ವಕಾಲಿಕ ಸತ್ಯ . 

ಗುರುವಿನ ಗುಲಾಮನಾಗುವ ತನಕ 
ದೊರೆಯದಣ್ಣ ಮುಕುತಿ ...||

ಎಂಬ ಮಾತನ್ನು ಮರೆಯಲಾಗದು.ಕಾಲ ಬದಲಾದಂತೆಲ್ಲಾ ಗುರುವಿನ ಸ್ಥಾನಮಾನ ಅಲ್ಪ ಸ್ವಲ್ಪ ಬದಲಾವಣೆಯಾದರೂ ಗುರುವಿನ ಮಹತ್ವ ಎಂದಿಗೂ ಬದಲಾಗಿಲ್ಲ. ಸದೃಢ ದೇಶದ ನಿರ್ಮಾಣಕ್ಕೆ ಗುರುಗಳ ಕೊಡುಗೆ ಅಭೂತಪೂರ್ವವಾದದ್ದು.  ಉತ್ತಮ ಸಮಾಜಕ್ಕೆ ಅಭಿವೃದ್ಧಿ ಹೊಂದುವ ಸಮೂಹಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ಗುರುಗಳಿಗೆ ಇದೆ.  ಆದರೂ ಗುರುವಿನ ಜೀವನ ಅಷ್ಟಕಷ್ಟೇ . 
    ಟಿಸಿಎಚ್, ಡಿಇಡಿ, ಬಿಇಡಿ  ಮುಗಿಸಿ ಬಂದ ನಂತರ ನಾನು ಶಿಕ್ಷಕನಾದೆ ಎಂಬುದು ಇಂದಿನ ದಿನಗಳಲ್ಲಿ ಸುಲಭವಲ್ಲ. ಟಿಇಟಿ, ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡ ಶಿಕ್ಷಕ ವೃತ್ತಿಯನ್ನು ಆರಂಭಿಸುವುದು ಅಷ್ಟು ಸಲೀಸಲ್ಲ . ಎಷ್ಟೇ ಓದಿದರೂ ಹಲವಾರು ಪರೀಕ್ಷೆಗಳನ್ನು ಪಾಸಾಗಬೇಕಾದ ಪರಿಸ್ಥಿತಿ ಇಂದು ಇದೆ. ನಿಜ ಹೇಳುವುದಾದರೆ ಪ್ರತಿಭಾವಂತರೇ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವದನ್ನು ನಾವು ಕಾಣಬಹುದು. ಶಿಕ್ಷಕ ವೃತ್ತಿಯೂ ಅಷ್ಟು ಸಲೀಸಾಗಿಲ್ಲ. ಕಲಿಸುವುದಕ್ಕಿಂತ ಇತರೆ ಕಾರ್ಯಗಳ ಭಾರವೇ ಹೆಚ್ಚು. ' ಕಲಿಸಲು ಬಿಡಿ ' ಎಂಬುದೇ ಎಲ್ಲ ಶಿಕ್ಷಕರ ಅಳಲು. ಸಂಬಳ, ವರ್ಗಾವಣೆ ,  ತಾಂತ್ರಿಕತೆ ಮುಂತಾದ ವಿಭಾಗಗಳಲ್ಲಿ ಒಂದಲ್ಲಾ ಒಂದು ತಾಪತ್ರಯಗಳು ಶಿಕ್ಷಕರನ್ನು ಕಾಡುತ್ತಿವೆ.  ಆದರೂ ಶಿಕ್ಷಕರು ತಮಗೆ ವಹಿಸಿರುವ ಕೆಲಸಗಳನ್ನು ಕರಾರುವಕ್ಕಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . ಸರಕಾರದ ಯೋಜನೆಗಳ ಯಶಸ್ಸಿನ ಹಿಂದೆ ಯಾವೂದಾದರೂ ಒಂದು ರೀತಿಯಲ್ಲಿ ಶಿಕ್ಷಕ ವೃಂದದ ಶ್ರಮವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ .

ಶಿಕ್ಷಕ ಎಂಬುದು ಅದೊಂದು ವೃತ್ತಿಯಲ್ಲ . ಅದೊಂದು  ಕರ್ತವ್ಯ ಅದೊಂದು ಜವಾಬ್ದಾರಿ . ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣತೊಟ್ಟ ಒಂದು ಸೈನ್ಯ.  ಎಂಥಹ ಹಳ್ಳಿಯಾದರೂ , ನಗರವಾದರೂ, ಮಲೆನಾಡು , ಬರಗಾಲದ ಬೆಂಗಾಡಾದರೂ ಸರಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಸಾವಿರಾರು ಶಿಕ್ಷಕರು ನಮ್ಮೊಳಗೆ ಇದ್ದಾರೆ.  ಮಗುವಿನ ಕನಸುಗಳಿಗೆ ತಂದೆ-ತಾಯಿಯರ ಕನಸುಗಳಿಗೆ ಸಾಕಾರವನ್ನು ನೀಡುವಂತಹ ಅಭೂತಪೂರ್ವ ಕಾರ್ಯವನ್ನು ಶಿಕ್ಷಣ ಬಳಗ ಕೈಗೊಳ್ಳುತ್ತಿದೆ.  ಶಿಕ್ಷಕರಿಗೆ ಸಮಾಜದ ಸಹಕಾರ ಅತಿ ಅವಶ್ಯಕವಾಗಿ ಬೇಕಾಗಿದೆ . ಸರಕಾರವು ಸಹ ಶಿಕ್ಷಕರನ್ನು ಹಲವು ಸಮಸ್ಯೆಗಳಿಂದ ಮುಕ್ತಿಗೊಳಿಸಿ ತೃಪ್ತರನ್ನಾಗಿಸಿದಾಗ ಶಿಕ್ಷಕ  ಬಳಗ ತನ್ನ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ . ಪ್ರತಿಯೊಬ್ಬ ಶಿಕ್ಷಕರೂ ಸಹ ಶಿಕ್ಷಕ ವೃತ್ತಿಯನ್ನು ವೃತ್ತಿಯಾಗಿ ನೋಡದೆ ಒಂದು ಕರ್ತವ್ಯ ಅಥವಾ ಒಂದು ಜವಾಬ್ದಾರಿ ಎಂದು ಪರಿಗಣಿಸಿ ಸಮರ್ಪಕವಾದ ಸೇವೆಯನ್ನು ನೀಡಿದಾಗ ದೇಶದ ಹಾಗೂ ಸಂವಿಧಾನದ ಆಶೋತ್ತರಗಳು ಖಂಡಿತವಾಗಿ ಸಂಪೂರ್ಣವಾಗಿ ಈಡೇರುತ್ತವೆ. ಈ  ನಿಟ್ಟಿನಲ್ಲಿ  ಪ್ರತಿಯೊಬ್ಬ  ಶಿಕ್ಷಕರು ಹೆಜ್ಜೆ ಇಡೋಣ.


=> ವೆಂಕಟೇಶ ಚಾಗಿ


ಬುಧವಾರ, ನವೆಂಬರ್ 26, 2025

ಯಾರೇ ಕೂಗಾಡಲಿ....!! | ಲೇಖನ‌ | ವೆಂಕಟೇಶ ಚಾಗಿ | yaare koogadali lekhana venkatesh chagi ಯಾರೇ ಕೂಗಾಡಲಿ....!!

   ಯಾರೇ ಕೂಗಾಡಲಿ....!!




ಮನುಷ್ಯ ಸಂಘ ಜೀವಿ.  ಎಲ್ಲರೊಂದಿಗೆ ಬದುಕು ಕಟ್ಟಿಕೊಳ್ಳುವ ಗುಣ ಅವನದು. ಒಬ್ಬಂಟಿಯಾಗಿ ಬದುಕು ಕಟ್ಟಿಕೊಳ್ಳುವ ಉದಾಹರಣೆಗಳು ಬಹುತೇಕ ವಿರಳ . ಹೀಗಾಗಿ ಹಳ್ಳಿ,  ಊರು ,  ನಗರಗಳು ನಿರ್ಮಾಣವಾಗಿವೆ. ಕುಟುಂಬದೊಂದಿಗೆ ತನ್ನ ಜೀವಿತ ದಿನಗಳನ್ನು ಕಳೆಯುವುದು ಮನುಷ್ಯನ ಲಕ್ಷಣ. ಎಷ್ಟೇ ಕಷ್ಟ ಬರಲಿ ಸುಖವಿರಲಿ ತನ್ನವರೊಂದಿಗೆ ಇರಬೇಕು ಸುಂದರ ಬದುಕು ಕಟ್ಟಿಕೊಳ್ಳಬೇಕು ತನ್ನ ಅಗತ್ಯತೆಗಳನ್ನು , ಆಸೆಗಳನ್ನು ಗುರಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದೇ ಮನುಷ್ಯನ ಬಯಕೆ .ಅದಕ್ಕಾಗಿ ದುಡಿಯುತ್ತಾನೆ ಕಷ್ಟ ಪಡುತ್ತಾನೆ ಕೆಲವೊಮ್ಮೆ ಮಾನ ಅವಮಾನಗಳನ್ನು ಅನುಭವಿಸುತ್ತಾನೆ . ಇವೆಲ್ಲ ಪ್ರತಿಯೊಬ್ಬರ ಬದುಕಿನಲ್ಲಿ ಸಹಜ . ಇವುಗಳನ್ನು ಮೀರಿ ನಿಲ್ಲಬೇಕಾಗಿರುವುದು ಅನಿವಾರ್ಯ.


ಬದುಕು ಕಟ್ಟಿಕೊಂಡ ಮೇಲೆ ಏನಾದರೂ ಸಾಧಿಸುವುದು ಮನುಷ್ಯನ ಬಯಕೆ .ಈ ನಿಟ್ಟಿನಲ್ಲಿ ಪಡುವ ಶ್ರಮಕ್ಕಿಂತ ಹತ್ತಿರದಲ್ಲಿರುವವರ ಮಾತುಗಳೇ ಮುಳುವಾಗಿಬಿಡುತ್ತವೆ. ಪ್ರೋತ್ಸಾಹ ನೀಡಿ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವಂತಹ ಗುಣ ಇರುವವರ ಸಂಖ್ಯೆ ತುಂಬಾ ಕಡಿಮೆ. ಅಸೂಹೆ ಅಸಹನೆ ಇರುವ ಜನರು ಇದ್ದಾರೆ. ಹಾಗೆಯೇ ತಟಸ್ಥ ಮನೋಭಾವವುಳ್ಳವರೂ ಇದ್ದಾರೆ. ಕೆಲವರಂತೂ ಜಗತ್ತೇ ಪ್ರಳಯವಾಗುವ ರೀತಿಯಲ್ಲಿ ಮಾತನಾಡಿ ನಮ್ಮ ಗುರಿ ಉದ್ದೇಶಗಳಿಗೆ ತಣ್ಣೀರು ಸುರಿಯುವ ಕಾರ್ಯ ಮಾಡುವವರೂ ಇದ್ದಾರೆ. ಇಂಥವರ ನಡುವೆ  ಅಂದುಕೊಂಡಿದ್ದನ್ನು ಸಾಧಿಸುವುದೇ ದೊಡ್ಡ ಸಾಧನೆ ಆಗಿಬಿಡುತ್ತದೆ.

 ಅವನಾರೋ ತಾನು ಕವಿಯಾಗಬೇಕೆಂದು ಬಯಸಿ ಎರಡು ಮೂರು ಕವಿತೆಗಳನ್ನು ಬರೆದಾಗ ಅವನನ್ನು ಅವನ ಕವಿತೆಗಳನ್ನು ಹೀಯಾಳಿಸಿ ಮತ್ತೆ ಅವನು ಅದರತ್ತ ಮುಖಮಾಡದಂತೆ ಮಾಡಿಬಿಡುತ್ತಾರೆ. ಮತ್ತಾರೋ ಸಮಾಜ ಸೇವೆ ಮಾಡಲು ಮುಂದೆ ಬಂದಾಗ ಅವನ ಜೊತೆಗಿರುವ ಜನರೇ ಅವನನ್ನು ಒಂಟಿಯಾಗಿ ಮಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ . ಮತ್ತಾರೋ ಒಬ್ಬ ರೈತನಾಗಬೇಕೆಂದಾಗ ಮೊದಲು ಅವನ ಮೇಲೆ ಪ್ರಯೋಗ ಮಾಡುವುದೇ ನಕಾರಾತ್ಮಕ ನುಡಿಗಳನ್ನು. ಹಾಗಾದರೆ ಯಾವುದೇ ಗುರಿ ಬಯಕೆಗಳನ್ನು ಇಟ್ಟುಕೊಳ್ಳದೇ ಬದುಕಲು ಸಾಧ್ಯವಾಗುತ್ತದೆಯೇ..? ಹಾಗೇ ಜೀವನವನ್ನು ಸಮಾಪ್ತಗೊಳಿಸಬೇಕೆ..? ಬದುಕಿದ್ದು ಸಾಧಿಸಿದ್ದೇನು..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಾವೇ ಕಂಡುಕೊಳ್ಳಬೇಕು.

"ಯಾರೇ ಕೂಗಾಡಲಿ...!!" ಎನ್ನುವಂತೆ ಗುರಿ ಬಯಕೆಗಳು ಸ್ಪಷ್ಟವಾಗಿದ್ದಾಗ ನಮ್ಮ ಬದುಕಿಗೆ ಸಕಾರಾತ್ಮಕ ವಾತಾವರಣವನ್ನು ಹಾಗೂ ಸಕಾರಾತ್ಮಕ ಪರಿಣಾಮಗಳನ್ನು ನೀಡುವಂತಿದ್ದಾಗ ಮತ್ತೊಬ್ಬರ ಮಾತುಗಳಿಗೆ ಕಿವಿ ಕೊಡದಿರುವುದೇ ಉತ್ತಮ.  ಸಲಹೆ , ಮಾರ್ಗದರ್ಶನಗಳು ಬೇಕೇ ಬೇಕು . ಹಾಗೆಯೇ ಎಚ್ಚರಿಕೆಯ ನುಡಿಗಳು ಅಗತ್ಯ. ಯಾವ ಕಾರ್ಯದ ಗೆಲುವು ಅಷ್ಟು ಸುಲಭವಲ್ಲ. ಯಾವುದೇ ಪರಿಣಾಮಕ್ಕೂ ನಾವೇ ಜವಾಬ್ದಾರರಾಗಿರುತ್ತೇವೆ ಎಂಬುದನ್ನು ಅರಿತಿರಬೇಕು. ನೂರು ಜನ ನೂರು ಮಾತನಾಡಲಿ ನಮ್ಮ ದಾರಿಯಲ್ಲಿ ನಡೆಯುವುದು ನಮ್ಮ  ದಾರಿಯಾಗಬೇಕು . ಎಲ್ಲರ ಮಾತುಗಳನ್ನು ಮಂಥನ ಮಾಡುತ್ತಾ ಕುಳಿತಾಗ ನಾವು ನಡೆಯುವ ಹಾದಿ ತಪ್ಪಾಗಿದೆಯೋ ಏನೋ ಎಂದಿನಿಸಿಬಿಡುತ್ತದೆ. ನಾಳೆ ಯಶಸ್ಸು ದೊರೆತಾಗ ಮಾತನಾಡಿದ ಬಾಯಿಗಳೇ ನಮ್ಮನ್ನು ಹೊಗಳುತ್ತವೆ. ಹಾಗಾಗಿ ಯಶಸ್ಸಿನತ್ತ ನಮ್ಮ ಚಿತ್ತವಿರಬೇಕು.


ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ