ಆಗದು ಎಂದು ಕೈ ಕಟ್ಟಿ ಕುಳಿತರೆ...!! | ಲೇಖನ | ವೆಂಕಟೇಶ ಚಾಗಿ | aagadu endu kai katti kulitare | lekhana | venkatesh chagi

 

ಆಗದು ಎಂದು ಕೈ ಕಟ್ಟಿ ಕುಳಿತರೆ...!!

ಲೇಖನ

ಜೀವನದಲ್ಲಿ ಕಷ್ಟ ಸುಖಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ್ಣವಾಗಿ ಕಷ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ್ಣವಾಗಿ ಸುಖವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ್ಣ ಸುಖದಿಂದ ಬದುಕಲಿ ಎಂದು ದೇವರು ಆಶೀರ್ವಾದ ಮಾಡಿ ಕಳುಹಿಸಿರುವುದಿಲ್ಲ ಅಥವಾ ಕಷ್ಟವೇ ಇವನ ಬದುಕಾಗಲಿ ಎಂದು ಶಾಪ ನೀಡಿ ಕಳುಹಿಸಿರುವುದಿಲ್ಲ. ಬದುಕು ಶೂನ್ಯದಿಂದಲೇ ಪ್ರಾರಂಭವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಖದ ಯಶಸ್ಸಿನ ಅನುಭವ ದೊರೆಯುತ್ತದೆ. ಯಶಸ್ಸಿನ  ಶಿಖರವೇರುವಾಗ ಮಾಡಬೇಕಾದ ಪ್ರಯತ್ನವೇ ಕಷ್ಟವೆನಿಸುತ್ತದೆಯೆರ ಹೊರತು ಕಷ್ಟವೆಂಬುದು ಬೇರೊಂದಿಲ್ಲ.

ಯಶಸ್ಸು ಪಡೆಯುವಂತಹ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿಕೊಂಡು ಕುಳಿತಿರುವುದಿಲ್ಲ. ಕ್ರೀಡೆ , ಸಿನಿಮಾ , ರಾಜಕೀಯ , ಕಲೆ ಸಾಹಿತ್ಯ , ವಿಜ್ಞಾನ , ಕೃಷಿ , ಆಡಳಿತ , ಸೇವೆ  ಹೀಗೆ ಹಲವಾರು ಕ್ಷೇತ್ರಗಳು ಅವಕಾಶಗಳು ನಮ್ಮ ಮುಂದಿವೆ. ಯಾವುದೇ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಯಾವುದೇ ರಂಗವನ್ನು ಆಯ್ಕೆಮಾಡಿಕೊಂಡರೂ ಯಶಸ್ಸು ಪಡೆಯುವುದು ಅಷ್ಟು ಸುಲಭವಲ್ಲ. ಯಶಸ್ಸಿಗಾಗಿ ಶ್ರಮ ಪಡದೇ ಇರುವುದು ಜೀವನವೇ ಅಲ್ಲ. 

ಒಂದು ಪಕ್ಷಿ ತಾನು ಒಂದು ಗೂಡು ಕಟ್ಟಿಕೊಂಡು ಅದರಲ್ಲಿ ಮೊಟ್ಟೆ ಇಟ್ಟು , ಕಾವು ಕೊಟ್ಟು , ಮರಿಗಳನ್ನು ಮಾಡಿ  , ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ ಪ್ರಯತ್ನ ಅಷ್ಟು ಸುಲಭವಲ್ಲ. ಅಯ್ಯೋ ಅಷ್ಟೊಂದು ಕಷ್ಟ ನನಗ್ಯಾಕೆ ಎಂದು ಪಕ್ಷಿ ಯಾವತ್ತೂ ಸುಮ್ಮನೆ ಕುಳಿತಿಲ್ಲ. ಗೂಡು ಕಟ್ಟಲು ಸೂಕ್ತವಾದ ಸ್ಥಳ ಹುಡುಕುವುದೇ ಅದರ ಮುಂದಿರುವ ಅತೀ ದೊಡ್ಡ ಸವಾಲು. ಆದರೂ ಸಮಯ ವ್ಯರ್ಥ ಮಾಡದೇ ಅಂತಹ ಸ್ಥಳವನ್ನು ಹುಡುಕುತ್ತದೆ. ತನ್ನ ಶ್ರಮ ಮುಂದಿನ ದಿನಗಳಲ್ಲಿ ವ್ಯರ್ಥ ಆಗಬಾರದು ಎಂಬುದು ಅದರ ಉದ್ದೇಶ. ಗೂಡು ಕಟ್ಟುವುದೂ ಅಷ್ಟು ಸುಲಭವಲ್ಲ ಹಕ್ಕಿಗೆ.‌ ಹಲವಾರು ಪ್ರದೇಶಗಳಿಗೆ ತೆರಳಿ ತನ್ನ ಗೂಡಿಗೆ ಬೇಕಾದ ಸೂಕ್ತವಾದ ಹುಲ್ಲು ಕಡ್ಡಿಗಳನ್ನು ಆಯ್ದುಕೊಂಡು ಬಂದು ಹಲವು ದಿನಗಳ ವರೆಗೆ ಶ್ರಮವಹಿಸಿ ಗೂಡು ಕಟ್ಟುತ್ತದೆ. ನಂತರ ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳ ಪೋಷಣೆ ಮಾಡುತ್ತದೆ. ಇದು ಹಕ್ಕಿಯ ಜೀವನ.

 ಹಕ್ಕಿಯ ಬದುಕಿನಲ್ಲೂ ಹಲವಾರು ಕಷ್ಟಗಳು ಎದುರಾತ್ತವೆ ಅಂದ ಮೇಲೆ ಮನುಷ್ಯನ ಬದುಕಿನಲ್ಲೂ ಕಷ್ಟಗಳು ಬರದೇ ಇರುವುದಿಲ್ಲ. ಮಾಡಬೇಕಾದ ಕೆಲಸ ಕಾರ್ಯ ಸಾಧ್ಯವಿಲ್ಲ ಎಂದು ಕುಳಿತಾಗ ಜೀವನ ಸಾರ್ಥಕವಾಗುವುದಾದರೂ ಹೇಗೆ..? ಬದುಕನ್ನು ಬದುಕಿಸಿ. ಬದುಕಿ ಸಾಧಿಸಿ. ಸಾಧಿಸಿ ಬದುಕನ್ನು ಗೆಲ್ಲಿಸಿ.

=> ವೆಂಕಟೇಶ ಚಾಗಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi

ಯಾರೇ ಕೂಗಾಡಲಿ....!! | ಲೇಖನ‌ | ವೆಂಕಟೇಶ ಚಾಗಿ | yaare koogadali lekhana venkatesh chagi ಯಾರೇ ಕೂಗಾಡಲಿ....!!

ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi