ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi



 ** ರೈಟ್ ರೈಟ್ **


ಹಾಸ್ಯ ಲೇಖನ


ಅಂದಿನ ಡ್ಯೂಟಿ ಮುಗಿಸಿ ಮನೆಗೆ ಬಂದೆ. ಮನೆಯಲ್ಲಿ ಏನೋ ಹೊಸ ವಾತಾವರಣ ಮೂಡಿತ್ತು . ಮನೆ ಅಷ್ಟೊಂದು ನೀಟಾಗಿ ಸ್ವಚ್ಚವಾಗಿ ಇರುವುದನ್ನು ಕಂಡು ಬಹಳ ದಿನಗಳೇ ಆಗಿದ್ದವು. ಏನೋ ಒಂದು ನನ್ನ ಅನುಮಾನ ಮನದೊಳಗೆ ಮೂಡಿತ್ತು. ಡ್ರೆಸ್ಸಿಂಗ್ ರೂಮಿನ ಮೂಲೆಯಲ್ಲಿ ಒಂದೆರಡು ಬ್ಯಾಗ್ ಗಳು ಹೊಟ್ಟೆ ಬಿರಿಯುವಷ್ಟು ಬಟ್ಟೆಗಳನ್ನು ನುಂಗಿಕೊಂಡು ಸಿದ್ಧವಾಗಿ ಕುಳಿತಿದ್ದವು. ನನ್ನಾಕೆಯ ಸದ್ದು ಇರಲಿಲ್ಲ . ಎಲ್ಲಿ ಹೋಗಿರಬಹುದು ? ಎಂದು ಯೋಚಿಸುತ್ತಾ ನಿಂತೆ.  'ಸಧ್ಯ ಮನೆ ತಣ್ಣಗೆ ಇದೆಯಲ್ಲ ಅಷ್ಟು ಸಾಕು 'ಎಂದು ಮನದಲ್ಲಿ ಅಂದುಕೊಂಡು ಶೆಖೆ ನಿವಾರಿಸಿಕೊಳ್ಳಲು ಪ್ಯಾನ್  ಹಾಕಿಕೊಂಡು ಸೋಫಾದ ಮೇಲೆ ಕುಳಿತೆ. 

ಅಷ್ಟೊತ್ತಿಗೆ ಹೊರಗಡೆಯಿಂದ ನಾಲ್ಕೈದು ಜನ ಹೆಣ್ಣು ಮಕ್ಕಳು ನಮ್ಮ ಮನೆಯ ಕಡೆಗೆ ಬರುವ ಸದ್ದು ಕೇಳಿ ಬಂತು . ಎದ್ದು ನೋಡಿದಾಗ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳೆಲ್ಲ ನಮ್ಮ ಮನೆಗೆ ದಾಳಿ ಇಡುತ್ತಿರುವುದು ಕಂಡು ಬಂತು. ಎಲ್ಲಾ ಮಹಿಳೆಯರು ಮನೆಯೊಳಗೆ ಬರುತ್ತಿದ್ದಂತೆ ಕುಳಿತುಕೊಳ್ಳಲು ಸೋಫಾ ಬಿಟ್ಟು ಕೊಡಬೇಕಾಯಿತು. 'ಬರ್ರಿ ಬರ್ರಿ' ಎಂದು ಎಲ್ಲರನ್ನೂ ಸ್ವಾಗತಿಸಿದೆ. ತಮ್ಮ ತಮ್ಮೊಳಗೆ ಏನೇನು ಮಾತನಾಡಿಕೊಳ್ಳುತ್ತಾ  ಇರುವುದು ಕಂಡು ಬಂದಿತು.  ಅದಾವುದೋ ಭಾರಿ ಸಿದ್ಧತೆಯಲ್ಲಿ ತೊಡಗಿದಂತೆ ಕಾಣುತ್ತಿತ್ತು. ಪಕ್ಕದ ಮನೆಯ ಪರಿಮಳ "ಸರ್, ನಾವೆಲ್ಲ ಮೂರ್ನಾಲ್ಕು ದಿನ ದೂರದ ಊರುಗಳಿಗೆ ಟೂರ್ ಹೊರಡುತ್ತಿದ್ದೇವೆ. ನಾವೆಲ್ಲ ಮಾತಾಡಿಕೊಂಡು ಧರ್ಮಸ್ಥಳ , ಸುಬ್ರಹ್ಮಣ್ಯ ಮತ್ತು ಇತರ ಕೆಲವು ಸ್ಥಳಗಳನ್ನು ನೋಡಿಕೊಂಡು ಬರುತ್ತೇವೆ. ನಿಮ್ಮ ಮಿಸಸ್ರನ್ನು ಕಳಿಸಿಕೊಡಿ. ನೀವು ತಪ್ಪದೇ ಕಳಿಸಲೇಬೇಕು" ಎಂದು ಕೇಳಿದಾಗ , ಸುಮ್ಮನೆ "ಆಗಲಿ , ಹೋಗಿ ಬನ್ನಿ" ಎಂದು ಅನ್ನಲೇ ಬೇಕಾಯಿತು. 

ಅಷ್ಟೊತ್ತಿಗೆ ನನ್ನಾಕೆ ಎಲ್ಲರಿಗೂ ಟೀ ತಂದು "ತಗೋರಿ,  ನಮ್ಮನೆ ಟೀ ರುಚಿ ನೋಡಿ" ಎಂದು ಎಲ್ಲರಿಗೂ ಸರಬರಾಜು ಮಾಡಿಳು. "ಈಗಾಗಲೇ ಮಂಜಕ್ಕ,  ಗಂಗಕ್ಕ , ರಂಗಕ್ಕ ಎಲ್ಲರ ಮನೆಯಲ್ಲಿ ಟೀ ಕುಡಿದಿದ್ದೇವೆ. ಮತ್ತೆ ಯಾಕೆ ಮಾಡಿದ್ರಿ?!" ಎಂದಳು ಪರಿಮಳ. " ಪರವಾಗಿಲ್ಲ ನಮ್ಮನೆ ಟೀ ರುಚಿ ನೋಡ್ರಿ" ಎನ್ನುತ್ತಿದ್ದಂತೆ ಎಲ್ಲರೂ ಈ ಸವಿದೇ ಬಿಟ್ಟಿದ್ದರು. "ಬಸ್ಸಿಗೆ ಟೈಮ್ ಆಗುತ್ತೆ . ಸೀಟು ಸಿಗದೆ ಹೋದ್ರೆ ತುಂಬಾ ತೊಂದರೆ.  ಸರ್,  ನೀವು ಬೇಗ ಹೋಗಿ ಸೀಟು ಹಿಡಿಯುತ್ತೀರಾ" ಎಂದು ಪಕ್ಕದ ಮನೆ ಪದ್ಮಕ್ಕ ನಯವಾಗಿ ಹೇಳುತ್ತಿದ್ದಂತೆ " ಹೂಂ" ಎಂದು ತಲೆ ಅಲ್ಲಾಡಿಸಿದೆ. "ಇವೆರಡು ಬ್ಯಾಗ್ ತೆಗೆದುಕೊಂಡು ಹೋಗಿ" ಎಂದು ತನ್ನ ಎರಡೂ ಬ್ಯಾಗ್ ಗಳನ್ನು ಕೈಗಿದ್ದಳು ನನ್ನಾಕೆ.


ಬಸ್ಟ್ಯಾಂಡಿಗೆ ಬರುತ್ತಿದ್ದಂತೆ ಅಲ್ಲಿ ಮಹಿಳೆಯರ ದಂಡೆ ನೆರೆದಿತ್ತು. ಈಗಾಗಲೇ ಎರಡು ಮೂರು ಬಸ್ಸುಗಳು ತುಂಬಾ ರಶ್ ಆಗಿ ಹೋಗಿದ್ದರಿಂದ ಡಿಪೋ ಮ್ಯಾನೇಜರ್ ಮತ್ತೆರಡು ಹೊಸ ಬಸ್ಸುಗಳನ್ನು ಬರಲು  ಹೇಳಿದ್ದರು. ಆ ಎರಡೂ ಹೊಸ ಹೊಸಗಳು ಬರುತ್ತಿದ್ದಂತೆ ಜನ ಬಸ್ ಏರಲು ಮುಗಿಬಿದ್ದಿದ್ದರು. ನಾನು ಹಳ್ಳಿಯಿಂದ ನಗರಕ್ಕೆ ಸಂತೆಗೆಂದು ಬಂದಾಗ ಹಳ್ಳಿ ಜನರು  ಬಸ್  ಏರಲು  ಮುಗಿಬಿದ್ದಿದ್ದು,  ಅದರಲ್ಲೇ ನಾನು ಕಿಟಕಿಯೊಳಗೆ ತೂರಿ ಸೀಟ್  ಹಿಡಿದಿಟ್ಟ ಕ್ಷಣಗಳು ನೆನಪಿಗೆ ಬಂದವು. ಈಗಲೂ ಅದೇ ಪರಿಸ್ಥಿತಿ ನನ್ನ ಎದುರಿತ್ತು. ಸೀಟ್ ಸಿಗದೇ ಹೋದರೆ ನನ್ನಾಕೆ ನಿಂತುಕೊಂಡೇ ಹೋಗಬೇಕಲ್ಲ ಎಂಬ ಕನಿಕರದಿಂದ ಬಸ್ ನ ಬಾಗಿಲು ಮೂಲಕ ಒಳ ನುಗ್ಗಲು ಸಾಧ್ಯವಾಗದೆ ಇದ್ದುದರಿಂದ ಅನಿವಾರ್ಯವಾಗಿ ಕಿಟಕಿಯ ಮೂಲಕ ನುಗ್ಗಬೇಕಾಯಿತು. ಮೊದಲೇ ನಾನು ತೆಳ್ಳಗೆ ಇರುವುದರಿಂದ ಕಿಟಕಿಯಿಂದ ನುಸುಳುವುದು ಅಷ್ಟು ಕಷ್ಟವೆನಿಸಲಿಲ್ಲ. ಅದರಲ್ಲೂ ಮೂರು ನಾಲ್ಕು ಗಂಡಸರು ನನ್ನ ಕಾಲುಗಳನ್ನು ಹಿಡಿದು ಕಿಡಿಕಿಯೊಳಗೆ ನುಗ್ಗಲು ಸಹಾಯ ಮಾಡಿದ್ದರು. ಪಕ್ಕದ ಮನೆಯ ಮಹಿಳೆಯರಿಗೂ ಇರಲಿ ಎಂದು ಮೂರು ಸೀಟನ್ನು ಹಿಡಿಯಲು ಬ್ಯಾಗ್ ಗಳನ್ನು ಸೀಟಿನ ಮೇಲಿಟ್ಟೆ. ಆದರೆ ಅದೇ ಸೀಟಿನ ಮೇಲೆ ಎರಡು ಖಾಲಿ ನೀರಿನ ಬಾಟಲ್ ಗಳು ಸೀಟ್ ಹಿಡಿದಿದ್ದವು. ಆ ಬಾಟಲಿಗಳನ್ನು ಬೇರೆ ಸೀಟಿಗೆ ಟ್ರಾನ್ಸ್ಫರ್ ಮಾಡಿ ಬ್ಯಾಗ ಇಟ್ಟೆ ಬ್ಯಾಗಿನಿಂದ ಒಂದು ಹಾಸಿಗೆ ತೆಗೆದು 3 ಸೀಟುಗಳನ್ನು ಕವರ್ ಮಾಡುವಂತೆ ಹಾಕಿದೆ.

ಎರಡು ಮೂರು ಸೆಕೆಂಡಿನಲ್ಲಿ ಬಸ್ಸು ತುಂಬಿ ಹೋಯಿತು. ಬಾಟಲಿ ಇಟ್ಟಿದ್ದವನೊಬ್ಬ ಬಂದು "ಸರ್ ಇಲ್ಲಿ  ಬಾಟಲಿ ಇಟ್ಟಿದ್ದೆ. ನೀವೇನಾದ್ರು ನೋಡಿದ್ರಾ?" ಅಂದ . "ಹಿಂದೆ ಇರಬೇಕು ನೋಡಿ" ಎಂದೆ . ಹೆಣ್ಣು ಮಕ್ಕಳೆಲ್ಲ ಅವನನ್ನು ಮುಂದಕ್ಕೆ  ದೂಡಿದರು. ಅಷ್ಟೊತ್ತಿಗೆ ನನ್ನಾಕೆ ಹಾಗೂ ಅವಳ ಬಳಗವೆಲ್ಲ ಬಸ್ ಏರಿದ್ದರು. " ಮನೆ ಕಡೆ ಹುಷಾರು ರೀ,  ಮನೆ ಬಿಟ್ಟು ಎಲ್ಲೂ ಹೋಗಬೇಡಿ. ಖರ್ಚಿಗೆ ಸ್ವಲ್ಪ ಹಣ ಕೊಡ್ತೀರಾ?" ಎಂದಳು ನನ್ನಾಕೆ ನಯವಾಗಿ. ಸರಿ ಎಂದು 2,000 ಕೈಗೆ ಕೊಟ್ಟೆ.  "ರೀ ಇಷ್ಟು ಸಾಲಲ್ಲ ಅಲ್ಲಿ ಏನೇನೋ ಖರ್ಚು ಇರುತ್ತೆ. ಇನ್ನು ಸ್ವಲ್ಪ ಕೊಡಿ" ಎಂದಳು. ಪಕ್ಕದಮನೆ  ಪದ್ಮಕ್ಕ ನನ್ನನ್ನು ಗುರಾಯಿಸಿ ನೋಡುತ್ತಾ , " ಸರ್,   ಒಂದು ಹತ್ತು ಸಾವಿರ ಕೊಡಿ. ಹೆಣ್ಮಕ್ಳಿಗೆ  ಬೇರೆ ಬೇರೆ ಖರ್ಚು ಇರ್ತವೆ." ಅಂದಳು.  'ಬಸ್ ಚಾರ್ಜೇ ನೂರರ ಲೆಕ್ಕದಲ್ಲಿ ಉಚಿತ  ಇದ್ದರೆ ಖರ್ಚು ಸಾವಿರ ಲೆಕ್ಕದಲ್ಲಿ ಇದೆಯಲ್ಲ' ಎಂದು ಮನಸ್ಸಿನಲ್ಲಿ ಅಂದುಕೊಂಡು, ಕಿಸೆಯಲ್ಲಿದ್ದ ಎಲ್ಲಾ ನೋಟುಗಳನ್ನು ಹೆಂಡತಿಯ ಕೈಗಿಟ್ಟೆ. "ಇಷ್ಟು ಸಾಕಾಗುತ್ತಲ್ಲ ರತ್ನಕ್ಕ " ಎಂದು ಮುಂದಿನಮನೆ ರತ್ನಕ್ಕಳನ್ನು ನನ್ನಾಕೆ ಕೇಳಿದಳು. "ಇಷ್ಟೂ ಸಾಲದೇ ಹೋದರೆ ಮಂಜಕ್ಕನ ಬಳಿ ಎಟಿಎಂ ಇದೆ ಅವರ ಬಳಿ ಸಾಲ ಕೇಳಿದರಾಯ್ತು" ಎಂದು ಮೆಲ್ಲಗೆ ಅಂದದ್ದು ನನ್ನ ಕಿವಿಗೆ ಬಿತ್ತು.   "ರೈಟ್ ರೈಟ್" ಎಂದು ಕಂಡಕ್ಟರ್ ಅನ್ನುತ್ತಿದ್ದಂತೆ ನಾನು ಇನ್ನೂ ಬಸ್ಸಿನಲ್ಲೇ ಇರುವುದು ಅರಿವಿಗೆ ಬಂತು. "ರೀ ಕಂಡಕ್ಟರ್ ಇರಿ, ನಾವು ಇಳಿಬೇಕು" ಎಂದು ಐದಾರು ಜನ  ಗಂಡು ಮಕ್ಕಳೊಂದಿಗೆ ನಾನೂ ಲಘು ಬಗೆಯಿಂದ ಗದ್ದಲದಲ್ಲಿ ತೂರಿ ಕೆಳಗೆ ಇಳಿಯಬೇಕಾಯಿತು. 

ಯಾರೋ ಯಾರದೋ ಕಾಲು ತಾಗಿದ್ದಕ್ಕೆ  ಜಗಳವೇ ಶುರುವಾಯಿತು. ಕಂಡಕ್ಟರ್ ಯಾವುದಕ್ಕೂ ಕಿವಿಗೊಡದೆ ಸೀಟುಗಳ ಮೇಲೆ ಕುಳಿತು ಟಿಕೆಟ್ ತೆಗೆದುಕೊಳ್ಳುತ್ತಿದ್ದ . ಬಾಗಿಲು ಬಳಿ ಇನ್ನೂ ಮೂರ್ನಾಲ್ಕು ಜನ ಗಂಡು ಮಕ್ಕಳು  ಹತ್ತುವ ಭರದಲ್ಲಿದ್ದರು. ಮತ್ತೆ ಕಂಡಕ್ಟರ್ 'ರೈಟ್ ರೈಟ್' ಎಂದ.  ನನ್ನಾಕೆ ಕಿಟಕಿಯಿಂದಲೇ ಟಾಟಾ ಎಂದು ಕೈಬೀಸಿದಳು. ನಾನು ಕೂಡ ಪ್ರಯಾಣ ಸುಖಕರವಾಗಿರಲಿ ಎನ್ನುವಂತೆ ಹರಸುತ್ತ 'ರೈಟ್ ರೈಟ್' ಎಂದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಯಾರೇ ಕೂಗಾಡಲಿ....!! | ಲೇಖನ‌ | ವೆಂಕಟೇಶ ಚಾಗಿ | yaare koogadali lekhana venkatesh chagi ಯಾರೇ ಕೂಗಾಡಲಿ....!!

ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi