yaare koogadali lekhana venkatesh chagi ಯಾರೇ ಕೂಗಾಡಲಿ....!!
ಯಾರೇ ಕೂಗಾಡಲಿ....!!
ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬದುಕು ಕಟ್ಟಿಕೊಳ್ಳುವ ಗುಣ ಅವನದು. ಒಬ್ಬಂಟಿಯಾಗಿ ಬದುಕು ಕಟ್ಟಿಕೊಳ್ಳುವ ಉದಾಹರಣೆಗಳು ಬಹುತೇಕ ವಿರಳ . ಹೀಗಾಗಿ ಹಳ್ಳಿ, ಊರು , ನಗರಗಳು ನಿರ್ಮಾಣವಾಗಿವೆ. ಕುಟುಂಬದೊಂದಿಗೆ ತನ್ನ ಜೀವಿತ ದಿನಗಳನ್ನು ಕಳೆಯುವುದು ಮನುಷ್ಯನ ಲಕ್ಷಣ. ಎಷ್ಟೇ ಕಷ್ಟ ಬರಲಿ ಸುಖವಿರಲಿ ತನ್ನವರೊಂದಿಗೆ ಇರಬೇಕು ಸುಂದರ ಬದುಕು ಕಟ್ಟಿಕೊಳ್ಳಬೇಕು ತನ್ನ ಅಗತ್ಯತೆಗಳನ್ನು , ಆಸೆಗಳನ್ನು ಗುರಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದೇ ಮನುಷ್ಯನ ಬಯಕೆ .ಅದಕ್ಕಾಗಿ ದುಡಿಯುತ್ತಾನೆ ಕಷ್ಟ ಪಡುತ್ತಾನೆ ಕೆಲವೊಮ್ಮೆ ಮಾನ ಅವಮಾನಗಳನ್ನು ಅನುಭವಿಸುತ್ತಾನೆ . ಇವೆಲ್ಲ ಪ್ರತಿಯೊಬ್ಬರ ಬದುಕಿನಲ್ಲಿ ಸಹಜ . ಇವುಗಳನ್ನು ಮೀರಿ ನಿಲ್ಲಬೇಕಾಗಿರುವುದು ಅನಿವಾರ್ಯ.
ಬದುಕು ಕಟ್ಟಿಕೊಂಡ ಮೇಲೆ ಏನಾದರೂ ಸಾಧಿಸುವುದು ಮನುಷ್ಯನ ಬಯಕೆ .ಈ ನಿಟ್ಟಿನಲ್ಲಿ ಪಡುವ ಶ್ರಮಕ್ಕಿಂತ ಹತ್ತಿರದಲ್ಲಿರುವವರ ಮಾತುಗಳೇ ಮುಳುವಾಗಿಬಿಡುತ್ತವೆ. ಪ್ರೋತ್ಸಾಹ ನೀಡಿ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವಂತಹ ಗುಣ ಇರುವವರ ಸಂಖ್ಯೆ ತುಂಬಾ ಕಡಿಮೆ. ಅಸೂಹೆ ಅಸಹನೆ ಇರುವ ಜನರು ಇದ್ದಾರೆ. ಹಾಗೆಯೇ ತಟಸ್ಥ ಮನೋಭಾವವುಳ್ಳವರೂ ಇದ್ದಾರೆ. ಕೆಲವರಂತೂ ಜಗತ್ತೇ ಪ್ರಳಯವಾಗುವ ರೀತಿಯಲ್ಲಿ ಮಾತನಾಡಿ ನಮ್ಮ ಗುರಿ ಉದ್ದೇಶಗಳಿಗೆ ತಣ್ಣೀರು ಸುರಿಯುವ ಕಾರ್ಯ ಮಾಡುವವರೂ ಇದ್ದಾರೆ. ಇಂಥವರ ನಡುವೆ ಅಂದುಕೊಂಡಿದ್ದನ್ನು ಸಾಧಿಸುವುದೇ ದೊಡ್ಡ ಸಾಧನೆ ಆಗಿಬಿಡುತ್ತದೆ.
ಅವನಾರೋ ತಾನು ಕವಿಯಾಗಬೇಕೆಂದು ಬಯಸಿ ಎರಡು ಮೂರು ಕವಿತೆಗಳನ್ನು ಬರೆದಾಗ ಅವನನ್ನು ಅವನ ಕವಿತೆಗಳನ್ನು ಹೀಯಾಳಿಸಿ ಮತ್ತೆ ಅವನು ಅದರತ್ತ ಮುಖಮಾಡದಂತೆ ಮಾಡಿಬಿಡುತ್ತಾರೆ. ಮತ್ತಾರೋ ಸಮಾಜ ಸೇವೆ ಮಾಡಲು ಮುಂದೆ ಬಂದಾಗ ಅವನ ಜೊತೆಗಿರುವ ಜನರೇ ಅವನನ್ನು ಒಂಟಿಯಾಗಿ ಮಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ . ಮತ್ತಾರೋ ಒಬ್ಬ ರೈತನಾಗಬೇಕೆಂದಾಗ ಮೊದಲು ಅವನ ಮೇಲೆ ಪ್ರಯೋಗ ಮಾಡುವುದೇ ನಕಾರಾತ್ಮಕ ನುಡಿಗಳನ್ನು. ಹಾಗಾದರೆ ಯಾವುದೇ ಗುರಿ ಬಯಕೆಗಳನ್ನು ಇಟ್ಟುಕೊಳ್ಳದೇ ಬದುಕಲು ಸಾಧ್ಯವಾಗುತ್ತದೆಯೇ..? ಹಾಗೇ ಜೀವನವನ್ನು ಸಮಾಪ್ತಗೊಳಿಸಬೇಕೆ..? ಬದುಕಿದ್ದು ಸಾಧಿಸಿದ್ದೇನು..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಾವೇ ಕಂಡುಕೊಳ್ಳಬೇಕು.
"ಯಾರೇ ಕೂಗಾಡಲಿ...!!" ಎನ್ನುವಂತೆ ಗುರಿ ಬಯಕೆಗಳು ಸ್ಪಷ್ಟವಾಗಿದ್ದಾಗ ನಮ್ಮ ಬದುಕಿಗೆ ಸಕಾರಾತ್ಮಕ ವಾತಾವರಣವನ್ನು ಹಾಗೂ ಸಕಾರಾತ್ಮಕ ಪರಿಣಾಮಗಳನ್ನು ನೀಡುವಂತಿದ್ದಾಗ ಮತ್ತೊಬ್ಬರ ಮಾತುಗಳಿಗೆ ಕಿವಿ ಕೊಡದಿರುವುದೇ ಉತ್ತಮ. ಸಲಹೆ , ಮಾರ್ಗದರ್ಶನಗಳು ಬೇಕೇ ಬೇಕು . ಹಾಗೆಯೇ ಎಚ್ಚರಿಕೆಯ ನುಡಿಗಳು ಅಗತ್ಯ. ಯಾವ ಕಾರ್ಯದ ಗೆಲುವು ಅಷ್ಟು ಸುಲಭವಲ್ಲ. ಯಾವುದೇ ಪರಿಣಾಮಕ್ಕೂ ನಾವೇ ಜವಾಬ್ದಾರರಾಗಿರುತ್ತೇವೆ ಎಂಬುದನ್ನು ಅರಿತಿರಬೇಕು. ನೂರು ಜನ ನೂರು ಮಾತನಾಡಲಿ ನಮ್ಮ ದಾರಿಯಲ್ಲಿ ನಡೆಯುವುದು ನಮ್ಮ ದಾರಿಯಾಗಬೇಕು . ಎಲ್ಲರ ಮಾತುಗಳನ್ನು ಮಂಥನ ಮಾಡುತ್ತಾ ಕುಳಿತಾಗ ನಾವು ನಡೆಯುವ ಹಾದಿ ತಪ್ಪಾಗಿದೆಯೋ ಏನೋ ಎಂದಿನಿಸಿಬಿಡುತ್ತದೆ. ನಾಳೆ ಯಶಸ್ಸು ದೊರೆತಾಗ ಮಾತನಾಡಿದ ಬಾಯಿಗಳೇ ನಮ್ಮನ್ನು ಹೊಗಳುತ್ತವೆ. ಹಾಗಾಗಿ ಯಶಸ್ಸಿನತ್ತ ನಮ್ಮ ಚಿತ್ತವಿರಬೇಕು.
> ವೆಂಕಟೇಶ ಚಾಗಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ