ಶಿಕ್ಷಕನೆಂದರೆ | ಲೇಖನ | ವೆಂಕಟೇಶ ಚಾಗಿ | shikshakanendare | lekhana | venkatesh chagi

  ಶಿಕ್ಷಕನೆಂದರೆ


(ಲೇಖನ)

ಯೂನಿಫಾರ್ಮ್ ಹಾಕಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು ಯಾವುದೋ ಯುದ್ದಕ್ಕೆ ಹೊರಟಂತೆ ಸಿದ್ದರಾಗಿ ಹೊರಟುನಿಂತ ಮಗುವಿನ ಕಣ್ಣುಗಳಲ್ಲಿ ಅದೆಷ್ಟೋ ಕನಸುಗಳು ಮೊಳೆಯುತ್ತಿವೆ. ಹೊಸ ಲೋಕಕ್ಕೆ ಹೊಸ ಪಯಣವನ್ನು ಬೆಳೆಸುತ್ತಾ ಪರಿಚಯವಾದ ಎಲ್ಲರೊಡನೆ ಬೆರೆಯುತ್ತಾ ಬದುಕನ್ನು ರೂಪಿಸಿಕೊಳ್ಳುವ ತವಕ ಮಗುವಿನಲ್ಲಿ ಅರಿವಿಲ್ಲದೆ ಬೆಳೆಯುತ್ತದೆ . ಹೆತ್ತು ಹೊತ್ತು  , ತುತ್ತನ್ನಿತ್ತು  ಬೆವರು ಹರಿಸಿ ನೋವು-ನಲಿವುಗಳನ್ನು ಉಂಡಂತಹ ತಂದೆ-ತಾಯಿಯರ ಮನದಲ್ಲಿ ಅದೆಷ್ಟೋ ಅಪರೂಪದ ಅದೆಷ್ಟು ಅಪರೂಪದ ಕನಸುಗಳು ಬಯಕೆಗಳು ತಾಂಡವವಾಡುತ್ತವೆ. ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಹೊಂದಿಕೊಂಡು ಬದುಕು ರೂಪಿಸುವ ಹಾಗೂ ತಾನು ಬೆಳೆಯುವ ಅವಶ್ಯಕತೆ ಪ್ರತಿ ಮಗುವಿನ ಹೆಗಲೇರುತ್ತದೆ . ಕನಸುಗಳ ಹೊತ್ತುಕೊಂಡು ಮಗು ಶಾಲೆಯ ಬಾಗಿಲನ್ನು ತಟ್ಟುತ್ತದೆ ಎಂದ ಮೇಲೆ ಶಾಲೆಯ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಲೇಬೇಕು . 

ಬದುಕು 
ಕಾಲದೊಂದಿಗೆ ಓಡುವ 
ನಮ್ಮದೇ ರಿಲೆ ,
ನಗುವಿನೊಂದಿಗೆ ಬದುಕ 
ಗೆಲ್ಲುವುದನ್ನು ಕಲಿಸುವುದೇ
ಜೀವನದ ಶಾಲೆ ..!!

ಎಲ್ಲರ ಬದುಕಿನಲ್ಲೂ ಶಾಲಾಜೀವನ ಮರೆಯದ ಅನುಭವಗಳನ್ನು ನೀಡುವಂತಹ ಒಂದು ಪಾಠಶಾಲೆ. ಶಿಕ್ಷಕರು ಸಹಪಾಟಿಗಳು ಆಟ-ಪಾಠ ಓದು ಬರಹ, ಪಠ್ಯ ಸಹಪಠ್ಯ ಹೀಗೆ ಹಲವಾರು ಅಂಶಗಳು ಪ್ರತಿಯೊಬ್ಬನ ಜೀವನದಲ್ಲಿ ಪ್ರಭಾವವನ್ನು ಬೀರುವುದಂತೂ ಸತ್ಯ. ಈ ಹಂತದಲ್ಲಿ ಶಿಕ್ಷಕರ ಪಾತ್ರ ಅತೀ  ಮಹತ್ವವಾದದ್ದು . ಸಮಾಜವನ್ನು ರೂಪಿಸುವಂತಹ ಕಲೆ ಗೊತ್ತಿರುವುದೇ ಶಿಕ್ಷಕರಿಗೆ. ಅದಕ್ಕೆ ಹೇಳುವುದು,

 ಗುರುಬ್ರಹ್ಮ ಗುರುವಿಷ್ಣು
 ಗುರುದೇವೋ ಮಹೇಶ್ವರ 
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ ||

ಎನ್ನುವ ಮಾತು ಖಂಡಿತ ಸತ್ಯ . ಹಿಂದಿನ ಕಾಲದಲ್ಲಿ ಗುರುವನ್ನು ಹುಡುಕಿಕೊಂಡು ಹೋಗಿ ಶಿಕ್ಷಣವನ್ನು ಪಡೆಯುವಂತಹ ಪದ್ಧತಿಯನ್ನು ನಾವು ಇತಿಹಾಸದಿಂದ ತಿಳಿಯುತ್ತೇವೆ. ಗುರುವಿನ ಮಹತ್ವವನ್ನು  ಪುರಾಣ ಪುಣ್ಯ ಕಥೆಗಳಲ್ಲಿಯೂ ಕಾಣಬಹುದು. ಅಸ ಶುಕ್ರಾಚಾರ್ಯರು , ದ್ರೋಣಾಚಾರ್ಯರು ಹೀಗೆ ಹಲವಾರು ಉದಾಹರಣೆಗಳನ್ನು ನೀಡಬಹುದು.  ಆದರೂ ತಾಯಿಯೇ ಮೊದಲ ಗುರು ಎಂಬುದಂತೂ ಸರ್ವಕಾಲಿಕ ಸತ್ಯ . 

ಗುರುವಿನ ಗುಲಾಮನಾಗುವ ತನಕ 
ದೊರೆಯದಣ್ಣ ಮುಕುತಿ ...||

ಎಂಬ ಮಾತನ್ನು ಮರೆಯಲಾಗದು.ಕಾಲ ಬದಲಾದಂತೆಲ್ಲಾ ಗುರುವಿನ ಸ್ಥಾನಮಾನ ಅಲ್ಪ ಸ್ವಲ್ಪ ಬದಲಾವಣೆಯಾದರೂ ಗುರುವಿನ ಮಹತ್ವ ಎಂದಿಗೂ ಬದಲಾಗಿಲ್ಲ. ಸದೃಢ ದೇಶದ ನಿರ್ಮಾಣಕ್ಕೆ ಗುರುಗಳ ಕೊಡುಗೆ ಅಭೂತಪೂರ್ವವಾದದ್ದು.  ಉತ್ತಮ ಸಮಾಜಕ್ಕೆ ಅಭಿವೃದ್ಧಿ ಹೊಂದುವ ಸಮೂಹಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ಗುರುಗಳಿಗೆ ಇದೆ.  ಆದರೂ ಗುರುವಿನ ಜೀವನ ಅಷ್ಟಕಷ್ಟೇ . 
    ಟಿಸಿಎಚ್, ಡಿಇಡಿ, ಬಿಇಡಿ  ಮುಗಿಸಿ ಬಂದ ನಂತರ ನಾನು ಶಿಕ್ಷಕನಾದೆ ಎಂಬುದು ಇಂದಿನ ದಿನಗಳಲ್ಲಿ ಸುಲಭವಲ್ಲ. ಟಿಇಟಿ, ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡ ಶಿಕ್ಷಕ ವೃತ್ತಿಯನ್ನು ಆರಂಭಿಸುವುದು ಅಷ್ಟು ಸಲೀಸಲ್ಲ . ಎಷ್ಟೇ ಓದಿದರೂ ಹಲವಾರು ಪರೀಕ್ಷೆಗಳನ್ನು ಪಾಸಾಗಬೇಕಾದ ಪರಿಸ್ಥಿತಿ ಇಂದು ಇದೆ. ನಿಜ ಹೇಳುವುದಾದರೆ ಪ್ರತಿಭಾವಂತರೇ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವದನ್ನು ನಾವು ಕಾಣಬಹುದು. ಶಿಕ್ಷಕ ವೃತ್ತಿಯೂ ಅಷ್ಟು ಸಲೀಸಾಗಿಲ್ಲ. ಕಲಿಸುವುದಕ್ಕಿಂತ ಇತರೆ ಕಾರ್ಯಗಳ ಭಾರವೇ ಹೆಚ್ಚು. ' ಕಲಿಸಲು ಬಿಡಿ ' ಎಂಬುದೇ ಎಲ್ಲ ಶಿಕ್ಷಕರ ಅಳಲು. ಸಂಬಳ, ವರ್ಗಾವಣೆ ,  ತಾಂತ್ರಿಕತೆ ಮುಂತಾದ ವಿಭಾಗಗಳಲ್ಲಿ ಒಂದಲ್ಲಾ ಒಂದು ತಾಪತ್ರಯಗಳು ಶಿಕ್ಷಕರನ್ನು ಕಾಡುತ್ತಿವೆ.  ಆದರೂ ಶಿಕ್ಷಕರು ತಮಗೆ ವಹಿಸಿರುವ ಕೆಲಸಗಳನ್ನು ಕರಾರುವಕ್ಕಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ . ಸರಕಾರದ ಯೋಜನೆಗಳ ಯಶಸ್ಸಿನ ಹಿಂದೆ ಯಾವೂದಾದರೂ ಒಂದು ರೀತಿಯಲ್ಲಿ ಶಿಕ್ಷಕ ವೃಂದದ ಶ್ರಮವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ .

ಶಿಕ್ಷಕ ಎಂಬುದು ಅದೊಂದು ವೃತ್ತಿಯಲ್ಲ . ಅದೊಂದು  ಕರ್ತವ್ಯ ಅದೊಂದು ಜವಾಬ್ದಾರಿ . ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣತೊಟ್ಟ ಒಂದು ಸೈನ್ಯ.  ಎಂಥಹ ಹಳ್ಳಿಯಾದರೂ , ನಗರವಾದರೂ, ಮಲೆನಾಡು , ಬರಗಾಲದ ಬೆಂಗಾಡಾದರೂ ಸರಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಸಾವಿರಾರು ಶಿಕ್ಷಕರು ನಮ್ಮೊಳಗೆ ಇದ್ದಾರೆ.  ಮಗುವಿನ ಕನಸುಗಳಿಗೆ ತಂದೆ-ತಾಯಿಯರ ಕನಸುಗಳಿಗೆ ಸಾಕಾರವನ್ನು ನೀಡುವಂತಹ ಅಭೂತಪೂರ್ವ ಕಾರ್ಯವನ್ನು ಶಿಕ್ಷಣ ಬಳಗ ಕೈಗೊಳ್ಳುತ್ತಿದೆ.  ಶಿಕ್ಷಕರಿಗೆ ಸಮಾಜದ ಸಹಕಾರ ಅತಿ ಅವಶ್ಯಕವಾಗಿ ಬೇಕಾಗಿದೆ . ಸರಕಾರವು ಸಹ ಶಿಕ್ಷಕರನ್ನು ಹಲವು ಸಮಸ್ಯೆಗಳಿಂದ ಮುಕ್ತಿಗೊಳಿಸಿ ತೃಪ್ತರನ್ನಾಗಿಸಿದಾಗ ಶಿಕ್ಷಕ  ಬಳಗ ತನ್ನ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ . ಪ್ರತಿಯೊಬ್ಬ ಶಿಕ್ಷಕರೂ ಸಹ ಶಿಕ್ಷಕ ವೃತ್ತಿಯನ್ನು ವೃತ್ತಿಯಾಗಿ ನೋಡದೆ ಒಂದು ಕರ್ತವ್ಯ ಅಥವಾ ಒಂದು ಜವಾಬ್ದಾರಿ ಎಂದು ಪರಿಗಣಿಸಿ ಸಮರ್ಪಕವಾದ ಸೇವೆಯನ್ನು ನೀಡಿದಾಗ ದೇಶದ ಹಾಗೂ ಸಂವಿಧಾನದ ಆಶೋತ್ತರಗಳು ಖಂಡಿತವಾಗಿ ಸಂಪೂರ್ಣವಾಗಿ ಈಡೇರುತ್ತವೆ. ಈ  ನಿಟ್ಟಿನಲ್ಲಿ  ಪ್ರತಿಯೊಬ್ಬ  ಶಿಕ್ಷಕರು ಹೆಜ್ಜೆ ಇಡೋಣ.


=> ವೆಂಕಟೇಶ ಚಾಗಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi

ಯಾರೇ ಕೂಗಾಡಲಿ....!! | ಲೇಖನ‌ | ವೆಂಕಟೇಶ ಚಾಗಿ | yaare koogadali lekhana venkatesh chagi ಯಾರೇ ಕೂಗಾಡಲಿ....!!

ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi