ಕಾಣದ ಕಡಲು | ಲೇಖನ | ವೆಂಕಟೇಶ ಚಾಗಿ‌ | Kaanada kadalu | lekhana | Venkatesh chagi

 ಕಾಣದ ಕಡಲು


(ಲೇಖನ)

ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷವೇನೋ ಪ್ರಾರಂಭ ವಾಯಿತು. ಶಾಲೆಯ ಮುಖ್ಯ ಗುರುಗಳು ಎಲ್ಲ ಶಿಕ್ಷಕರಿಗೂ ತರಗತಿ ಹಾಗೂ ವಿಷಯಗಳನ್ನು ಹಂಚಿ ತಮ್ಮ ತಮ್ಮ ಕೆಲಸಗಳನ್ನು ಚಾಚೂ ತಪ್ಪದೆ ಸಕಾಲದಲ್ಲಿ ಮಾಡಲು ಸಲಹೆ ನೀಡಿದರು. ನನ್ನ ಪಾಲಿಗೆ ಬಂದದ್ದು ನಲಿಕಲಿ ತರಗತಿ. ಅದರಂತೆ ತರಗತಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಶ್ರದ್ದೆಯಿಂದ ಕೈಗೊಂಡು ತರಗತಿಯನ್ನು ಅಚ್ಚುಕಟ್ಟಾಗಿ ಸಿದ್ದಗೊಳಿಸಿದೆ. ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿ ದಿನ ಮಕ್ಕಳು ಹಾಜರಾಗತೊಡಗಿದರು. ನನ್ನ ತರಗತಿ ಸುಗಮವಾಗಿ ನಡೆಯತೊಡಗಿತು. 

ಆ ಒಂದು ದಿನ ತರಗತಿಗೆ ಬಂದಾಗ ಎಲ್ಲಾ ಮಕ್ಕಳು ತಮ್ಮ ತಮ್ಮ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಓರ್ವ ವಿದ್ಯಾರ್ಥಿ ಮಾತ್ರ ತನ್ನಷ್ಟಕ್ಕೆ ತಾನೇ ಮಾತನಾಡುತ್ತಾ ಕುಳಿತಿದ್ದ. " ಯಾಕಪ್ಪಾ ಅಲ್ಲಿ ಕುಳಿತಿದ್ದಿಯಾ? ಬಾ , ನಿನ್ನ ಸ್ನೇಹಿತರೊಂದಿಗೆ ಕುಳಿತುಕೊ" ಎಂದು ಮಾತನಾಡಿಸಿದೆ. ಮಕ್ಕಳೆಲ್ಲಾ " ಸಾರ್ , ಅವನಿಗೆ ಕಣ್ಣು ಕಾಣಲ್ಲ ಸರ್. ದಿನಾಲೂ ಅವನು ಅದೇ ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ." ಎಂದರು. ಮತ್ತೆ ಮುಂದುವರೆಸಿ " ಅವನಿಗೇನೂ ಬರಲ್ಲ ಸರ್ , ಅವ್ನು ತುಂಬಾ ದಡ್ಡ ಸರ್ ಆದರೆ ಚೆನ್ನಾಗಿ ಹಾಡು ಹೇಳ್ತಾನೆ" ಎಂದರು. ಮೂಲೆಯಲ್ಲಿ ಕುಳಿತ ಹುಡುಗನನ್ನು ನಯವಾಗಿ ಮಾತನಾಡಿಸಿದೆ. ಅವನನ್ನು ಮಕ್ಕಳ ಮಧ್ಯ ಕೈ ಹಿಡಿದು ಕರೆತಂದು ನಿಲ್ಲಿಸಿ , ನಿನ್ನ ಹೆಸರು ಏನಪ್ಪಾ ಎಂದೆ. ಅದಕ್ಕವನು "ಸರ್, ನನ್ನ ಹೆಸರು ನಾಗರಾಜ ಸರ್" ಎಂದ. ಹಾಗೇಯೇ ಅವನ ಕುಟುಂಬದ ಬಗ್ಗೆ ವಿಚಾರಿಸಿದಾಗ ನಿರರ್ಗಳವಾಗಿ ನಾನು ಕೇಳುವ ಪ್ರಶ್ನೆಗಳಿಗೆ ಫಟ್ ಫಟ್ ಎಂದು ಉತ್ತರಿಸಿದ. ಹಾಗೆಯೇ ಕನ್ನಡ ಇಂಗ್ಲಿಷ್ ಮೂಲಾಕ್ಷರಗಳನ್ನು , ವಾರಗಳನ್ನು , ಮಗ್ಗಿಗಳನ್ನು ಸರಾಗವಾಗಿ ಹೇಳಿದ. " ನೀನು ಹಾಡು ಚೆನ್ನಾಗಿ ಹೇಳ್ತಿಯಂತಲ್ಲೋ " ಎಂದಾಗ ಒಂದು ಜನಪದ ಗೀತೆಯನ್ನೂ ಹೇಳಿದ. ಅವನಲ್ಲಿರುವ ಉತ್ಸಾಹ ಕಂಡು ಮೂಕವಿಸ್ಮಿತನಾದೆ. "ಗುಂಪಿನಲ್ಲಿ ಯಾಕೆ ಕುಳಿತುಕೊಳ್ಳಲ್ಲ ನೀನು ? " ಎಂದಾಗ " ಸಾರ್  ನನ್ನ ದೂಡ್ತಾರೆ ಸರ್, ನಂಗೆ ಏನೇನೋ ಮಾತಾಡ್ತಾರೆ. ಅದ್ಕೆ ನಾನು ಇಲ್ಲಿ ಕುತಿರ್ತೀನಿ." ಅವನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ. ಎರಡು ಕಣ್ಣುಗಳು ಇಲ್ಲದಿದ್ದರೂ ಕಿವಿಗಳು ಚೆನ್ನಾಗಿ ಕೇಳುತ್ತಿದ್ದವು. ಅವನ ಗ್ರಹಣ ಶಕ್ತಿ ಎಷ್ಟಿತ್ತೆಂದರೆ ಒಂಡೆರಡು ಬಾರಿ ಹೇಳಿದ ಶಬ್ದಗಳನ್ನು ತಕ್ಷಣ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಆದರೆ ಇತರೆ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು ಅವನಿಗೆ ಕಷ್ಟವೆನಿಸುತ್ತಿತ್ತು. ಹಿಂದೆ ಆ ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಶಿಕ್ಷಕರ ಬಳಿ ಆ ಮಗುವಿನ ಬಗ್ಗೆ ಚರ್ಚಿಸಿದೆ. "ಸರ್ , ಅವರ ಮನೆಯಲ್ಲಿ ಬಡತನ. ತಂದೆ ಇಲ್ಲ ತಾಯಿ ಇದ್ದಾಳೆ. ಒಬ್ಬ ನಮ್ಮ ಶಾಲೆಯಲ್ಲೆ ಓದುತ್ತಿದ್ದಾನೆ. ಇವನನ್ನು ವಿಶೇಷ ಶಾಲೆಗೆ ಸೇರಿಸಲು ಹೇಳಿದೆವು . ಆದರೆ ತಾಯಿ ಒಪ್ಪಲಿಲ್ಲ. ಹಿಂದೆ ಈ ಕೆಲಸ ಮಾಡಿದಾಗ ಅವನು ತಾಯಿಯಿಂದ ದೂರ ಇರದೇ ಮತ್ತೆ ಮನೆಗೆ ಬಂದ. ಈಗ ನಮ್ಮಲ್ಲಿ ಇರುವವರೆಗೂ ಅವನಿಗೆ ಸಾಧ್ಯವಾದಷ್ಟು ವಿದ್ಯೆ ನೀಡಬೇಕಷ್ಟೆ . ಅವನು ಕಲಿತಷ್ಟು ಕಲಿಯಲಿ. ಅನವ ಬಗ್ಗೆ ಜಾಸ್ತಿ ಗಮನ ಹರಿಸಬೇಡಿ." ಎಂದರು. 

ಅವರ ಸಲಹೆ ನನಗೇಕೊ ಸರಿ ಎನಿಸಲಿಲ್ಲ. ಆದರೂ ಅವರು ಆ ವಿದ್ಯಾರ್ಥಿ ಗಾಗಿ ಹಲವಾರು ಪ್ರಯತ್ನ ಗಳನ್ನು ಮಾಡಿ ವಿಫಲರಾಗಿದ್ದರು.ಎಲ್ಲ ಮಕ್ಕಳಂತೆ ಅವನೂ ಕಲಿಯಲು ಶಾಲೆಗೆ ಬಂದಿದ್ದಾನೆ. ಅವನಲ್ಲಿರುವ ಪ್ರತಿಭೆಗೆ ಸೂಕ್ತ ಒಳಪು ನೀಡಬೇಕು ಎಂದೆನಿಸಿತು. ಪ್ರತಿದಿನ ತರಗತಿಯಲ್ಲಿ ಎಲ್ಲಾ ಮಕ್ಕಳೊಂದಿಗೆ ಅವನು ಬೆರೆಯುವಂತೆ ಸಂದರ್ಭಗಳನ್ನು ಸೃಷ್ಟಿಸಿದೆ.ಎಲ್ಲ ಚಟುವಟಿಕೆಗಳಲ್ಲೂ ಅವನು ಪಾಲ್ಗೊಳ್ಳತೊಡಗಿದನು. ಅವನ ಸ್ಮರಣ ಶಕ್ತಿ ಗೆ ತಕ್ಕಂತೆ ಕಲಿಕೆಯಲ್ಲಿ ಪ್ರಗತಿ ಸಾಧಿಸಿ ಹಿರಿಯ ವಿದ್ಯಾರ್ಥಿ ಗಳಿಗೂ ಪ್ರಶ್ನಿಸುವ ಸಾಮರ್ಥ್ಯ ಅವನಲ್ಲಿ ಬೆಳೆಯಿತು. ಎಲ್ಲ ಮಕ್ಕಳ ದ್ವನಿ ಅವನಲ್ಲಿ ಎಷ್ಟು ಕರಗತವಾಗಿತ್ತೆಂದರೆ ಯಾರೇ ಮಾತನಾಡಿದರೂ ಅವರ ಹೆಸರನ್ನು ಗುರುತಿಸುತ್ತಿದ್ದ. ಲೆಕ್ಕಾಚಾರವನ್ನು ಮನದಲ್ಲೆ ಮಾಡಿ  ಪೆನ್ನು ಪುಸ್ತಕ ಹಿಡಿದ ಮಕ್ಕಳಿಗಿಂತ ಮೊದಲೇ ಉತ್ತರ ಹೇಳುತ್ತಿದ್ದ. ಶಾಲೆ ಬಿಡುವ ಮೊದಲು " ಸರ್ , ಹೋಮ್ ವರ್ಕ ಏನು ಸರ್ ?" ಎಂದು ಕೇಳುವ ಮೊದಲ ದ್ವನಿ ಅವನದಾಗಿತ್ತು. "ನೀನು ಹೇಗೋ ಹೋಂ ವರ್ಕ ಮಾಡ್ತಿಯಾ? " ಎಂದರೆ " ಸರ್, ನಾನು ಹೇಳ್ತಾ ಹೋಗ್ತೇನೆ ನಮ್ಮ ತಾಯಿ ಬರೆಯುತ್ತಾಳೆ ಸರ್. ನೀವು ನಂಗೆ ಜಾಸ್ತಿ ಹೋಂ ವರ್ಕ ಕೊಡಿ ಸರ್ " ಎಂದಾಗ ಅವನ ಮಾತುಗಳು ಮನತಟ್ಟಿದವು. ಅವನಲ್ಲಿರುವ ಕಲಿಯುವ ಆಸಕ್ತಿ , ನಿರ್ಭಯ ಅವನ ಬಲವಾದರೆ ದೃಷ್ಟಿ ಇಲ್ಲದಿರುವುದು ಕೊರತೆ ಎನ್ನಿಸಲಿಲ್ಲ. ಸಭೆ ಸಮಾರಂಭಗಳಲ್ಲಿ , ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿ ಅವಕಾಶ ನೀಡಿದಾಗ ಪ್ರಶಸ್ತಿ ಪಕ್ಕಾ ಇತ್ತು. 
ಇಂತಹ ಅನೇಕ ಮಕ್ಕಳು ನಮ್ಮ ಶಾಲೆಗಳಲ್ಲಿ ಇದ್ದಾರೆ. ಅಂಗವಿಕಲತೆ ಮಕ್ಕಳ ಕಲಿಕೆಗೆ ಅಡ್ಡಿ ಆಗಬಾರದಷ್ಟೇ . ಅವಕಾಶಗಳನ್ನು ಅಂತಹ ಮಕ್ಕಳಿಗೆ ನೀಡಿದಾಗ ತಮ್ಮ ಪ್ರತಿಭೆಯನ್ನು 
ಜಗತ್ತಿಗೆ ತೋರ್ಪಡಿಸಲು ಸಾಧ್ಯವಾಗುತ್ತದೆ ಅಲ್ಲವೇ. ಹಳ್ಳಿಗಾಡಿನ ಪ್ರದೇಶಗಳು, ಸ್ಲಂ ಗಳು, ಮನೆ ಪರಿಸರದ ಅನಾನುಕೂಲತೆಯಲ್ಲಿ ಬದುಕುವ ಇಂತಹ ಮಕ್ಕಳು ವಿಶೇಷ ಶಾಲೆಗಳಲ್ಲಿ ಪ್ರವೇಶ ಹೊಂದಲು ಅನಿವಾರ್ಯ ಕಾರಣಗಳಿಂದ ಸಾದ್ಯವಾಗದೇ ಇರಬಹುದು. ಆದರೆ ಪಾಲಕರು , ಸ್ಥಳೀಯ ಶಾಲೆಯ ಶಿಕ್ಷಕರ ಪ್ರೋತ್ಸಾಹ ಇಂತಹ ಮಕ್ಕಳ ಬದುಕಿನಲ್ಲಿ ಆಶಾಕಿರಣವನ್ನೇ ಮೂಡಿಸಬಹುದು. 

=> ವೆಂಕಟೇಶ ಚಾಗಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈಟ್ ರೈಟ್ | ಹಾಸ್ಯ ಲೇಖನ | ವೆಂಕಟೇಶ ಚಾಗಿ | right right | hasya lekhana | venkatesh chagi

ಯಾರೇ ಕೂಗಾಡಲಿ....!! | ಲೇಖನ‌ | ವೆಂಕಟೇಶ ಚಾಗಿ | yaare koogadali lekhana venkatesh chagi ಯಾರೇ ಕೂಗಾಡಲಿ....!!